ಇಂದಿನ ಪೋಷಕರಿಗೆ ಮಕ್ಕಳನ್ನು ಸಂತೋಷವಾಗಿಡಬೇಕು ಅನ್ನೋ ತಾತ್ಪರ್ಯ ತುಂಬಾ ಹೆಚ್ಚು. ಅದಕ್ಕಾಗಿ ಮಕ್ಕಳು ಕೇಳಿದ ತಕ್ಷಣಲೇ ಆಟಿಕೆ, ಖಾದ್ಯ, ಗ್ಯಾಜೆಟ್, ಹೊಸ ಬಟ್ಟೆ ಹೀಗೆ ಏನೇ ಬೇಕಾದರೂ ಕೊಡೋದು ಸಾಮಾನ್ಯ. ಕೆಲವೊಮ್ಮೆ ಮಕ್ಕಳು “ಅವನ ಹತ್ರ ಆ ಆಟದ ಸಾಮಾನಿದೇ, ಅದು ನನಗೂ ಬೇಕು?” ಅನ್ನೋ ಮಕ್ಕಳ ಪ್ರಶ್ನೆಗೆ ಪೋಷಕರು ಇಲ್ಲ ಎನ್ನದೆ ಎಲ್ಲವನ್ನು ತೆಗೆಸಿಕೊಡುತ್ತಾರೆ. ಆದರೆ, ಕೇಳಿದ ಕೇಳಿದ ವಸ್ತುಗಳನ್ನು ಕೊಡೋದು ಸರಿನಾ? ಹೇಗೆ ಕೊಡೋದ್ರಿಂದ ಏನಾಗುತ್ತೆ?
ಖಚಿತ ಮಿತಿಯ ಅರಿವಿಲ್ಲದಂತೆ ಮಾಡಬಹುದು
ಮಕ್ಕಳಿಗೆ ಎಲ್ಲಾ ಇಷ್ಟಪಡೋ ವಸ್ತುಗಳನ್ನು ತಕ್ಷಣ ಕೊಡೋದು, ಅವರಿಗೆ “ಎಲ್ಲವನ್ನೂ ಈಗಲೇ ಸಿಗಬೇಕು” ಅನ್ನೋ ಮನೋಭಾವವನ್ನು ಬೆಳೆಸಬಹುದು. ಇದರಿಂದ ಅವರು ಆಂತರಿಕ ಶಿಸ್ತು ಇಲ್ಲದೆ ಬೆಳೆದರೆ, ಭವಿಷ್ಯದಲ್ಲಿ ಧೈರ್ಯದಿಂದ ಎದುರಿಸಬೇಕಾದ ಸಂಕಷ್ಟಗಳಲ್ಲಿ ಹಿನ್ನಡೆ ಆಗಬಹುದು.
ತಾತ್ಕಾಲಿಕ ಖುಷಿ, ಶಾಶ್ವತ ನಿರೀಕ್ಷೆ
ಮೊದಲ ಬಾರಿ ನೀಡಿದ ವಸ್ತು ಸಂತೋಷ ನೀಡಬಹುದು. ಆದರೆ ನಂತರದ ಬಾರಿ ಅದೇ ಮಟ್ಟದ ಅಥವಾ ಹೆಚ್ಚು ಬೆಲೆಯ ವಸ್ತು ನಿರೀಕ್ಷೆ ಮಾಡುತ್ತಾರೆ. ಈ ನಿರೀಕ್ಷೆಗಳ ಅವಲಂಬನೆ ಮಕ್ಕಳ ಮನಸ್ಸನ್ನು ಅತಿಶಯ ಕಾಳಜಿಯತ್ತ ಕರೆದೊಯ್ಯುತ್ತದೆ.
ಹಣದ ಮೌಲ್ಯಕ್ಕೆ ಅರ್ಥವಿಲ್ಲದಂತೆ ಆಗಬಹುದು
ಮಕ್ಕಳು ಎಲ್ಲವನ್ನೂ ಸಿಗುವ ಪರಿಸರದಲ್ಲಿ ಬೆಳೆದರೆ, ಹಣ ಸಂಪಾದನೆ ಎಷ್ಟು ಕಷ್ಟ ಅನ್ನೋದು ಅರ್ಥವಾಗುವುದಿಲ್ಲ. ಇದು ಮುಂದೆ financial discipline ಮೇಲೆ ದುಷ್ಪ್ರಭಾವ ಬೀರುತ್ತದೆ.
ತಾಳ್ಮೆ ಕಡಿಮೆ ಆಗಬಹುದು
ನಮಗೆ ಬೇಕಾದದ್ದು ತಕ್ಷಣ ಸಿಗದಿರುವುದು ಜೀವನದ ಮುಖ್ಯ ಪಾಠ. ಆದರೆ ತಕ್ಷಣ ತೃಪ್ತಿ ಸಿಗುತ್ತಾ ಬಂದರೆ, ತಾಳ್ಮೆ, ಸಹನೆ, ಕಾಯುವ ಮನೋಭಾವ ಇವೆಲ್ಲ ಮಾಯವಾಗಿಬಿಡುತ್ತವೆ.
ಹತಾಶೆ ಹೆಚ್ಚಾಗಬಹುದು
ಯಾವುದಕ್ಕೂ ಕಾಯದೆ ತಕ್ಶಣ ಎಲ್ಲವು ಸಿಗುವುದು ಸಾಮಾನ್ಯವಾದರೆ, ಸಿಗದಿದ್ದಾಗ ತೀವ್ರ ನಿರಾಶೆ ಉಂಟಾಗಬಹುದು. ಕೆಲವೊಮ್ಮೆ ಇದು ಉಡುಪು, ಬ್ರ್ಯಾಂಡ್ ಅಥವಾ ಫೋನ್ ಇಲ್ಲದ ಕಾರಣದಿಂದ ಕೀಳರಿಮೆಗೂ ಕಾರಣವಾಗಬಹುದು.
ಮಕ್ಕಳಿಗೆ ಬೇಕಾದ ಎಲ್ಲವನ್ನೂ ಕೊಡೋದು ಪ್ರೀತಿಯ ಸಂಕೇತವಾಗಬಹುದು, ಆದರೆ ಎಲ್ಲದರಲ್ಲೂ ಮಿತಿಯ ಅಗತ್ಯವಿದೆ. ಅವರಲ್ಲಿ ಸಂಯಮ, ಮೌಲ್ಯಮಾಪನ, ತಾಳ್ಮೆ ಬೆಳೆಸೋದು ಮುಖ್ಯ. ಮಕ್ಕಳಿಗೆ “ಇಲ್ಲ” ಎನ್ನುವ ಪಾಠವನ್ನೂ ನೀಡೋದು ಪೋಷಕರ ಮುಖ್ಯ ಹೊಣೆ.