ಮಕ್ಕಳು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಸಾಮಾನ್ಯ, ಆದರೆ ಮಕ್ಕಳಿಗೆ ಈ ಪರಿಸ್ಥಿತಿ ಮುಜುಗರವನ್ನುಂಟುಮಾಡಬಹುದು. ಹಾಗೂ ಪಾಲಕರಿಗೂ ಆತಂಕವನ್ನುಂಟುಮಾಡಬಹುದು. ಹಾಗಂತ ಮಕ್ಕಳನ್ನು ಹೊಡೆದು ಬಡಿದು ಸರಿ ಮಾಡೋಕಾಗಲ್ಲ. ಅದಕ್ಕಾಗಿ ನಾವು ಶಾಂತಿಯುತವಾಗಿ ಹಾಗೂ ಸಂಯಮದಿಂದ ಮಕ್ಕಳಲ್ಲಿ ಈ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು.
ಮಲಗಲು ಹೋಗುವ ಮೊದಲು ಮೂತ್ರ ವಿಸರ್ಜನೆ ಮಾಡಿಸುವುದು:
ಮಕ್ಕಳಿಗೆ ನಿದ್ರೆಗೆ ಹೋಗುವ ಮೊದಲು ಶೌಚಾಲಯಕ್ಕೆ ಹೋಗುವ ಅಭ್ಯಾಸವನ್ನು ಕಲಿಸಿ. ಇದು ಮಲಗುವ ವೇಳೆ ಮೂತ್ರಕೋಶಗಳು ಖಾಲಿಯಾಗಿರುವುದರಿಂದ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಸಂಭವ ಕಡಿಮೆಯಾಗುತ್ತದೆ.
ರಾತ್ರಿಯ ವೇಳೆಯಲ್ಲಿ ಹೆಚ್ಚಿನ ನೀರು ಅಥವಾ ಜ್ಯೂಸ್ ಕೊಡಬೇಡಿ:
ಮಲಗುವ 1–2 ಗಂಟೆಗಳ ಒಳಗೆ ಹೆಚ್ಚು ನೀರು ಅಥವಾ ಹಾಲು ನೀಡಬೇಡಿ. ಇದರಿಂದ ಮೂತ್ರದ ಪ್ರಮಾಣ ಹೆಚ್ಚಾಗಿ, ನಿದ್ರೆಯಲ್ಲಿಯೇ ಮೂತ್ರ ವಿಸರ್ಜಿಸುವ ಸಾಧ್ಯತೆ ಇರುತ್ತದೆ.
ಪಾಸಿಟಿವ್ ರೀವಾರ್ಡ್ ಸಿಸ್ಟಮ್ ಬಳಸುವುದು:
ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸದಿದ್ದರೆ ಮಕ್ಕಳಿಗೆ ಪ್ರೋತ್ಸಾಹದ ರೂಪದಲ್ಲಿ ಪುಟಾಣಿ ಉಡುಗೊರೆ, ಸ್ಟಿಕರ್ ಅಥವಾ ಪ್ರಶಂಸೆ ನೀಡಿ. ಇದು ಅವರಿಗೆ ಆತ್ಮವಿಶ್ವಾಸ ಹೆಚ್ಚಿಸಿ ಮುಂದಿನ ದಿನಗಳಲ್ಲಿ ಹಾಸಿಗೆ ಮೂತ್ರ ಮಾಡದಂತೆ ಪ್ರೇರಣೆ ನೀಡುತ್ತದೆ.
ಮಕ್ಕಳ ಜೊತೆ ಧೈರ್ಯ ಮತ್ತು ಸಹನೆಯಿಂದ ನಡೆದುಕೊಳ್ಳಿ:
ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವುದು ಮಕ್ಕಳ ತೊಂದರೆ ಎಂಬಂತೆ ನೋಡದೆ, ಅವುಗಳು ಬೆಳವಣಿಗೆಯ ಭಾಗವೆಂದು ಅರ್ಥಮಾಡಿಕೊಳ್ಳಿ. ಇವರ ಮೇಲೆ ನಕಾರಾತ್ಮಕ ಒತ್ತಡ ಹೆರುವ ಬದಲು, ಪ್ರೋತ್ಸಾಹ ನೀಡಿ.
ಸಮಯಬದ್ಧ ಪ್ಯಾಟರ್ನ್ ಅನುಸರಿಸಲಿ:
ಮಕ್ಕಳ ನಿದ್ರೆ ಸಮಯ ನಿಗದಿ ಮಾಡಿ ಹಾಗೂ ಪ್ರತಿದಿನವೂ ಒಂದೇ ಸಮಯದಲ್ಲಿ ಮಲಗುವ ಹಾಗೂ ಎಬ್ಬಿಸುವ ಅಭ್ಯಾಸವನ್ನು ರೂಢಿಸಿ. ಇದು ದೈಹಿಕ ಸಹಜ ದಿನಚರ್ಯೆಗೆ ಸಹಾಯ ಮಾಡುತ್ತದೆ ಮತ್ತು ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸ ಕಡಿಮೆಯಾಗಬಹುದು.
ಮಕ್ಕಳಲ್ಲಿ ಮೂತ್ರ ವಿಸರ್ಜಿಸುವ ಅಭ್ಯಾಸ ಕಡಿಮೆ ಮಾಡುವಲ್ಲಿ ತಾಳ್ಮೆ, ಪ್ರೋತ್ಸಾಹ ಮತ್ತು ನಿರಂತರ ಸಹಕಾರ ಮುಖ್ಯವಾಗಿರುತ್ತದೆ. ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಯ ಭಾಗವಾಗಿ ಈ ಸಮಸ್ಯೆ ಇದ್ದರೂ, ಸರಿಯಾದ ಮಾರ್ಗದರ್ಶನದಿಂದಲೇ ಅದನ್ನು ನಿವಾರಣೆ ಮಾಡಬಹುದು.