ಎಲ್ಲಾ ಮಕ್ಕಳು ಒಂದೇ ರೀತಿ ಇರಲ್ಲ. ಕೆಲವರು ಎಲ್ಲರೊಂದಿಗೆ ಮಾತುಕತೆ ನಡೆಸುತ್ತಾ ತುಂಬಾ ಚೂಟಿಯಾಗಿದ್ರೆ, ಕೆಲವರು ನಿಶ್ಶಬ್ದವಾಗಿ ತಮ್ಮದೇ ಲೋಕದಲ್ಲಿ ಇರುತ್ತಾರೆ. ಹೊಸ ವ್ಯಕ್ತಿಗಳನ್ನು ನೋಡಿ ಮೌನವಾಗಿರುವುದು ಅಥವಾ ಹೊಸ ಪರಿಸ್ಥಿತಿಗೆ ಹೆದರುವುದೇ ತಪ್ಪಲ್ಲ. ಇದು ಅವರ ವ್ಯಕ್ತಿತ್ವದ ಒಂದು ಶೈಲಿ ಮಾತ್ರ. ಆದರೆ, ಈ ಶೈಲಿಯ ಮಕ್ಕಳಲ್ಲೂ ಧೈರ್ಯದಿಂದ ಮಾತನಾಡುವ ಶಕ್ತಿ, ಆತ್ಮವಿಶ್ವಾಸ ಬೆಳೆಸುವದು ಪೋಷಕರ ಸದುದ್ದೇಶದ ಮಾರ್ಗದರ್ಶನದಿಂದ ಸಾಧ್ಯ.
“ನಾಚಿಕೆ ಸ್ವಭಾವ” ಎಂಬ ಟ್ಯಾಗ್ ಬೇಡ
ಮಗು ಎಲ್ಲರ ಜೊತೆ ಮಾತನಾಡದೇ ಇದ್ದರೆ “ಇವನು ನಾಚಿಕೆಪಡುವವನು” ಎಂಬುದಾಗಿ ಪರಿಚಯಿಸುವುದು ತಪ್ಪು. ಇದು ಮಕ್ಕಳ ಮನಸ್ಸಿನಲ್ಲಿ, ತಾವು ಮಾತಾಡದೆ ಇರುವ ವ್ಯಕ್ತಿಯೆಂದು ಭಾವನೆ ಮೂಡಿಸುತ್ತದೆ. ಬದಲಿಗೆ, “ಅವನು ಮೊದಲು ಜನರನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುತ್ತಾನೆ” ಎಂಬ ಮಾತು ಹೆಚ್ಚು ಸ್ಪಷ್ಟ ಮತ್ತು ಧನಾತ್ಮಕ.
ಮಗುವಿನ ವೇಗ ಗೌರವಿಸಲು ಪೋಷಕರಿಂದಲೇ ಪ್ರಾರಂಭ
ತಕ್ಷಣ ಮಾತನಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ಶಾಂತ ಮಕ್ಕಳಿಗೆ ತಮ್ಮ ಹೆಜ್ಜೆಯಲ್ಲಿ ಬೆಳೆಯಲು ಅವಕಾಶ ನೀಡಿ. ನಿತ್ಯದ ಸಣ್ಣ ಕಾರ್ಯಗಳಲ್ಲಿ ಧೈರ್ಯ ಬೆಳೆಸುವ ಪ್ರಯತ್ನ ಮಾಡಿ. ಹೋಟೆಲ್‌ನಲ್ಲಿ ಆಹಾರ ಆರ್ಡರ್ ಮಾಡಲು ಹೇಳುವುದು ಅಥವಾ ಧನ್ಯವಾದ ಹೇಳಲು ಪ್ರೇರೇಪಿಸುವುದು ಪ್ರಾರಂಭದ ಚಿಕ್ಕ ಹೆಜ್ಜೆ.
ಅಭಿವ್ಯಕ್ತಿಗೆ ಸೂಕ್ತ ಪರಿಸರ ಅಗತ್ಯ
ಹೆಚ್ಚು ಮಾತನಾಡದ ಮಕ್ಕಳಿಗೆ ಬರವಣಿಗೆ, ಚಿತ್ರಕಲೆ ಅಥವಾ ಸಂಗೀತದ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಅವಕಾಶ ನೀಡಿ. ಈ ಮಾಧ್ಯಮಗಳನ್ನು ಗೌರವಿಸಿ, ಅವರು ತಮ್ಮ ರೀತಿಯಲ್ಲಿ ಧೈರ್ಯವಂತರಾಗಲಿದ್ದಾರೆ.
ಮನೆಯಲ್ಲಿಯೇ ಅಭ್ಯಾಸದ ಮೂಲಕ ಧೈರ್ಯವರ್ಧನೆ
ಹೊಸ ಸನ್ನಿವೇಶಗಳಿಗೆ ಮಕ್ಕಳು ತಯಾರಾಗಿಲ್ಲದಿದ್ದರೆ, ಮನೆಯಲ್ಲಿಯೇ “ಮಾತುಕತೆ ಆಟ” ಆಡಿ. ಪೋಷಕರು ಸ್ನೇಹಿತರಾಗಿಯೂ ಶಿಕ್ಷಕರಾಗಿಯೂ ನಡೆದು, ಅವರಿಗೆ ನಿಜ ಜೀವನದ ಸನ್ನಿವೇಶಗಳ ಅಭ್ಯಾಸ ನೀಡಿ.
ಇತರರೊಂದಿಗೆ ಹೋಲಿಕೆ ಬೇಡ, ಪ್ರೋತ್ಸಾಹ ನೀಡಿದರೆ ಸಾಕು
“ಅವನು ಏನು ಪಟಪಟ ಮಾತಾಡ್ತಾನೆ, ನೀನು ಯಾಕೆ ಮಾತನಾಡಲ್ಲ ಅಂತೀಯ?” ಎಂಬ ಹೋಲಿಕೆಗೆ ಬದಲಾಗಿ, “ಇಂದು ನೀನು ನನ್ನ ಸಹಾಯವಿಲ್ಲದೇ ‘ಹಾಯ್’ ಹೇಳಿದೆಯಲ್ಲ! ಅದ್ಭುತ!” ಎನ್ನುವ ಪ್ರೋತ್ಸಾಹ ತುಂಬಾ ಪರಿಣಾಮಕಾರಿ.
ಪೋಷಕರು ಮಾದರಿಯಾಗಲಿ
ಮಕ್ಕಳು ಅವರ ಸುತ್ತಲಿನವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನೋಡಿ ಕಲಿಯುತ್ತಾರೆ. ನೀವು ಹೊಸ ಜನರೊಂದಿಗೆ ಆತ್ಮವಿಶ್ವಾಸದಿಂದ ಮಾತನಾಡುವ ಮೂಲಕ ಧೈರ್ಯದ ಮಾದರಿಯಾಗಬಹುದು.
ಉತ್ತರಕ್ಕೆ ಸಮಯ ನೀಡಿ
ಮಗು ತಕ್ಷಣ ಉತ್ತರಿಸದಿದ್ದರೆ, ನಿಮ್ಮಿಂದಲೇ ಮಾತುಗಳನ್ನು ಪೂರ್ಣಗೊಳಿಸುವುದನ್ನು ತಪ್ಪಿಸಿ. ಸಮಯ ನೀಡಿ, ಸಮಯ ತೆಗೆದುಕೊಂಡು ಉತ್ತರಿಸಲು ಪ್ರೋತ್ಸಾಹ ನೀಡಿ.
ಮಕ್ಕಳು ವೇದಿಕೆ ಮೇಲೆ ಮಾತನಾಡಿದರೆ ಮಾತ್ರ ಧೈರ್ಯವಂತರಾಗುತ್ತಾರೆ ಎಂಬುದು ತಪ್ಪು ಕಲ್ಪನೆ. ಶಾಂತವಾಗಿ, ಸದುದ್ದೇಶದಿಂದ ಮಾತನಾಡಿದರೂ ಅದು ಧೈರ್ಯವೇ. ತಮ್ಮ ಶೈಲಿಯಲ್ಲಿ ಧೈರ್ಯ ತೋರಿಸುವ ಮಕ್ಕಳಿಗೆ ಬೆಂಬಲ ನೀಡುವುದು ಪೋಷಕರ ಜವಾಬ್ದಾರಿ. ಇದು ಸಹನೆ ಮತ್ತು ನಿರಂತರ ಪ್ರೋತ್ಸಾಹದಿಂದ ಸಾಧ್ಯ. ಪೋಷಕರ ಬೆಂಬಲವೇ ಮಕ್ಕಳ ಆತ್ಮವಿಶ್ವಾಸದ ಮೂಲವಂತು ಎಂಬ ಸತ್ಯವನ್ನು ಮರೆಯಬಾರದು.