ಇಂದಿನ ಕಾಲದಲ್ಲಿ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್, ಟಿವಿ ಹಾಗೂ ಕಂಪ್ಯೂಟರ್ ಸ್ಕ್ರೀನ್‌ಗಳ ಮುಂದೆ ಕಳೆಯುತ್ತಿರುವುದು ಸಾಮಾನ್ಯವಾಗಿದೆ. ಈ ಜೀವನಶೈಲಿ ಅವರ ಕಣ್ಣಿನ ಮೇಲೆ ಪರಿಣಾಮ ಬೀರಿದೆ. ಕೇವಲ ಸ್ಕ್ರೀನ್‌ಗಳಷ್ಟೇ ಅಲ್ಲ, ಸರಿಯಾದ ಬೆಳಕು ಇಲ್ಲದ ವಾತಾವರಣ, ತಪ್ಪಾಗಿ ಕುಳಿತುಕೊಂಡು ಓದುವ ಭಂಗಿ ಹಾಗೂ ಸ್ವಚ್ಛತೆಯ ಕೊರತೆ ಕೂಡ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಮಕ್ಕಳ ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಪೋಷಕರ ಪ್ರಮುಖ ಹೊಣೆಗಾರಿಕೆಯಾಗಿದೆ. ಮಕ್ಕಳಲ್ಲಿ ಕಣ್ಣಿನ ಸಮಸ್ಯೆಗಳನ್ನು ತಪ್ಪಿಸಲು ಕೆಲವೊಂದು ಸರಳ ನಿಯಮಗಳನ್ನು ಪಾಲಿಸುವುದು ಅತ್ಯಂತ ಅಗತ್ಯ.
ಸರಿಯಾದ ಕುಳಿತುಕೊಳ್ಳುವ ಭಂಗಿ: ಮಕ್ಕಳು ಓದುವಾಗ ಅಥವಾ ಟಿವಿ ನೋಡುವಾಗ ಸರಿಯಾದ ದೂರ ಮತ್ತು ಭಂಗಿಯನ್ನು ಕಾಪಾಡುವುದು ಮುಖ್ಯ. ತಪ್ಪಾದ ರೀತಿಯಲ್ಲಿ ಕುಳಿತುಕೊಳ್ಳುವುದು pseudo-myopia ಎನ್ನುವ ಸಮೀಪ ದೃಷ್ಟಿದೋಷಕ್ಕೆ ಕಾರಣವಾಗಬಹುದು.
ಸರಿಯಾದ ಬೆಳಕು: ಓದುವಾಗ ಬೆಳಕು ಸಮರ್ಪಕವಾಗಿರದಿದ್ದರೆ ಕಣ್ಣುಗಳಿಗೆ ಒತ್ತಡ ಉಂಟಾಗುತ್ತದೆ. ಆದ್ದರಿಂದ ಮಕ್ಕಳ ಓದು ಕೋಣೆಯಲ್ಲಿ ಸಾಕಷ್ಟು ಬೆಳಕು ಇರಬೇಕು.
ಕಣ್ಣು ರಕ್ಷಿಸುವ ಸಾಧನಗಳು: ಮಕ್ಕಳು ಧೂಳಿನಲ್ಲಿ ಆಡುವಾಗ ಅಥವಾ ಅಪಾಯದ ಪರಿಸರದಲ್ಲಿ ಇರುವಾಗ ಸೇಫ್ಟಿ ಗ್ಲಾಸ್ ಅಥವಾ ಸನ್‌ಗ್ಲಾಸ್ ತೊಡಿಸುವುದು ಅಗತ್ಯ. ಪಟಾಕಿ ಹೊಡೆಯುವ ಸಂದರ್ಭದಲ್ಲೂ ಕಣ್ಣುಗಳ ರಕ್ಷಣೆಯ ಬಗ್ಗೆ ಗಮನ ಕೊಡಬೇಕು.
ಸ್ಕ್ರೀನ್ ಟೈಮ್ ನಿಯಂತ್ರಣೆ: ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಲು ಪೋಷಕರು ನಿಯಮ ಮಾಡಿಕೊಳ್ಳಬೇಕು. 20-20-20 ನಿಯಮ (20 ನಿಮಿಷ ಸ್ಕ್ರೀನ್ ನೋಡಿದ ಬಳಿಕ 20 ಸೆಕೆಂಡ್ 20 ಅಡಿ ದೂರದ ವಸ್ತುವನ್ನು ನೋಡುವುದು) ಪಾಲಿಸಲು ಕಲಿಸಬೇಕು.
ಕಣ್ಣಿನ ಪರೀಕ್ಷೆ: ನಿರಂತರವಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದು ಅತ್ಯಂತ ಮುಖ್ಯ. ಇದರಿಂದ ದೃಷ್ಟಿದೋಷವನ್ನು ಪ್ರಾರಂಭದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆಯನ್ನು ನೀಡಬಹುದು.