ಮಕ್ಕಳನ್ನು ಬೆಳೆಸುವುದು ಪೋಷಕರ ಜೀವನದ ಅತ್ಯಂತ ಪ್ರಮುಖ ಹೊಣೆಗಾರಿಕೆಯಲ್ಲಿ ಒಂದು. ಅನೇಕ ಪೋಷಕರು ತಮ್ಮ ಮಕ್ಕಳನ್ನು ಅತ್ಯುತ್ತಮವಾಗಿ ತಿಳಿದಿದ್ದಾರೆಂದು ಭಾವಿಸುತ್ತಾರೆ. ಆದರೆ ಅದು ಯಾವಾಗಲೂ ನಿಜವಾಗಿರುವುದಿಲ್ಲ. ಕೆಲವೊಮ್ಮೆ ನಾವು ಅವರ ಯೋಗಕ್ಷೇಮದಲ್ಲಿ ಎಷ್ಟು ಮುಳುಗಿರುತ್ತೇವೆಂದರೆ ಅವರ ಜೀವನದ ಬಗ್ಗೆ ಮೂಲಭೂತ ವಿಷಯಗಳನ್ನು ತಿಳಿದುಕೊಳ್ಳಲು ನಾವು ಮರೆತುಬಿಡುತ್ತೇವೆ.
ಇಂದುದಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಜೀವನವನ್ನು ಕಲ್ಪಿಸುವ ಉದ್ದೇಶದಿಂದ ಕೆಲಸದಲ್ಲಿ ನಿರತರಾಗಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಕೆಲವೊಮ್ಮೆ ಮಕ್ಕಳ ಆಂತರಿಕ ಜಗತ್ತನ್ನು ಅರ್ಥಮಾಡಿಕೊಳ್ಳಲು ನಾವು ವಿಫಲವಾಗುತ್ತೇವೆ. ಅದಕ್ಕಾಗಿ ಮಕ್ಕಳೊಂದಿಗೆ ನಿರಂತರವಾಗಿ ಆಳವಾದ, ಅರ್ಥಪೂರ್ಣ ಸಂಭಾಷಣೆ ನಡೆಸುವುದು ಅತ್ಯಂತ ಮುಖ್ಯ.
ಪೋಷಕರಾಗಿ ನಾವು ಕೇಳಬೇಕಾದ ಮೊದಲ ಪ್ರಶ್ನೆ:
“ನಿಮಗೆ ಸಂತೋಷವನ್ನುಂಟು ಮಾಡುವುದು ಏನು?” ಈ ಪ್ರಶ್ನೆ ಮಗು ಯಾವ ಚಟುವಟಿಕೆಯಿಂದ ಸಂತೋಷಪಡುವುದು, ಅವರು ಯಾವ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ.
ಇದೇ ರೀತಿ, “ನೀವು ಯಾವುದಕ್ಕೆ ಹೆದರುತ್ತೀರಿ?” ಎಂಬ ಪ್ರಶ್ನೆ, ಮಗುವಿನ ಆತಂಕ, ಭಯಗಳ ಕುರಿತು ತಿಳಿಯಲು ಹಾಗೂ ಧೈರ್ಯ ತುಂಬಲು ಅವಕಾಶ ಒದಗಿಸುತ್ತದೆ.
“ಭವಿಷ್ಯದ ಬಗ್ಗೆ ನಿನಗೆ ಏನನ್ನಿಸುತ್ತದೆ?” ಎಂಬ ಪ್ರಶ್ನೆ ಆಕಾಂಕ್ಷೆಗಳ ದಿಕ್ಕಿನಲ್ಲಿ ಪೋಷಕರ ಮಾರ್ಗದರ್ಶನಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಮಗುವಿಗೆ ಸ್ಪೂರ್ತಿದಾಯಕ ವ್ಯಕ್ತಿ ಯಾರು ಎಂಬುದನ್ನು ತಿಳಿದುಕೊಳ್ಳುವುದರಿಂದ, ಅವರ ಕನಸುಗಳು, ಮೌಲ್ಯಗಳು ಮತ್ತು ಗುರಿಗಳನ್ನು ಅರಿಯಬಹುದು.
“ ಶಾಲೆಯ ಬಗ್ಗೆ ಹೇಗೆ ಅನಿಸುತ್ತೆ?” ಎಂಬ ಪ್ರಶ್ನೆ ಮೂಲಕ, ಶೈಕ್ಷಣಿಕ ಅಥವಾ ಸಾಮಾಜಿಕ ಸವಾಲುಗಳ ಬಗ್ಗೆ ಮಗುವಿನ ಮನೋಭಾವವನ್ನು ತಿಳಿದುಕೊಳ್ಳಬಹುದು.
ಜೊತೆಗೆ “ನೀವು ಕಲಿಯಲು ಬಯಸುವ ವಿಷಯ ಏನು?” ಎಂಬ ಪ್ರಶ್ನೆ ಅವರ ಕುತೂಹಲ ಮತ್ತು ಕೌಶಲ್ಯಗಳ ಬೆಳವಣಿಗೆಗೆ ದಾರಿ ಮಾಡಿಕೊಡುತ್ತದೆ. ಅದು ಹೊಸ ಭಾಷೆಯನ್ನು ಕಲಿಯುವುದರಿಂದ ಹಿಡಿದು ನಿರ್ದಿಷ್ಟ ಕೌಶಲ್ಯವನ್ನು ಕರಗತ ಮಾಡಿಕೊಳ್ಳುವವರೆಗೆ ಯಾವುದಾದರೂ ಆಗಿರಬಹುದು.
ಅಂತಿಮವಾಗಿ, “ನಿನ್ನ ಬಗ್ಗೆ ನನಗೆ ತಿಳಿದಿರಬೇಕೆಂಬ ವಿಷಯ ಏನಾದರೂ ಇದೆಯೆ?” ಎಂಬ ಪ್ರಶ್ನೆ, ಇದು ಅವರಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿ ತಮ್ಮನ್ನು ತಾವು ವ್ಯಕ್ತಪಡಿಸಲು ಸುರಕ್ಷಿತ ಸ್ಥಳವನ್ನು ಸೃಷ್ಟಿಸುತ್ತದೆ. ಜೊತೆಗೆ ಪೋಷಕ-ಮಕ್ಕಳ ನಡುವೆ ನಂಬಿಕೆ ಹಾಗೂ ಭಾವನಾತ್ಮಕ ಸಂಬಂಧ ಬೆಳೆಸಲು ಪ್ರಮುಖ ಪಾತ್ರ ವಹಿಸುತ್ತದೆ.