ಟೀನೇಜ್ ಅನ್ನೋದು ಎಲ್ಲ ಪೋಷಕರಿಗೂ ಪರಿಚಿತವಾಗುವ ಅವಧಿ. ಈ ಹಂತದಲ್ಲಿ ಮಕ್ಕಳಲ್ಲಿ ದೈಹಿಕ ಬದಲಾವಣೆಗಳಷ್ಟೇ ಅಲ್ಲದೆ, ಮನಸ್ಸು, ಭಾವನೆಗಳಲ್ಲಿಯೂ ನಾನಾ ಬದಲಾವಣೆಗಳು ಕಾಣಿಸುತ್ತವೆ. ಹಾರ್ಮೋನುಗಳ ಪರಿಣಾಮದಿಂದಾಗಿ ಪ್ರೀತಿ, ಆಕರ್ಷಣೆ, ನಿರ್ಧಾರಗಳು ಎಲ್ಲವೂ ಪ್ರಬಲವಾಗಬಹುದು. ಕೆಲವೊಮ್ಮೆ ಮಕ್ಕಳ ಮನಸ್ಸು ಪ್ರೀತಿಯ ದಾರಿಗೆ ತಿರುಗುವ ಸಾಧ್ಯತೆ ಇರುತ್ತದೆ. ಇದು ಸಹಜವಾದುದಾದರೂ, ಭವಿಷ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಪೋಷಕರು ಹದಿಹರೆಯದ ಮಕ್ಕಳು ಪ್ರೀತಿಯಲ್ಲಿ ಬೀಳದಂತೆ ನೋಡಿಕೊಳ್ಳಬೇಕು.
ಮಕ್ಕಳೊಂದಿಗೆ ಮುಕ್ತ ಸಂಭಾಷಣೆ ನಡೆಯಲಿ
ಮಕ್ಕಳೊಂದಿಗೆ ನೀವು ಗೆಳೆಯರಂತಾಗಿ ಮಾತನಾಡುವ ಮೂಲಕ ಅವರು ತಮ್ಮ ಭಾವನೆಗಳನ್ನು ಓಪಾಗಿ ಹಂಚಿಕೊಳ್ಳುತ್ತಾರೆ. ದಿನದ ಚಟುವಟಿಕೆ, ಶಾಲೆ-ಕಾಲೇಜಿನಲ್ಲಿ ಏನಾಯ್ತು ಎಂಬುದನ್ನು ಕೇಳುವುದು ಮುಖ್ಯ. ಇದರಿಂದ ಮಕ್ಕಳು ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಪೋಷಕರು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಆದ್ಯತೆಗಳ ಪಾಠ ಹೇಳಿ
ಈ ವಯಸ್ಸಿನಲ್ಲಿ ಮಕ್ಕಳಿಗೆ ಏನು ಮುಖ್ಯ ಎಂಬುದರ ಅರಿವು ಮೂಡಿಸಬೇಕು. ಓದು, ಗುರಿ, ಶಿಸ್ತು, ಸಮಯದ ಮಹತ್ವ – ಈ ಎಲ್ಲದನ್ನು ಎಳವೆಯಲ್ಲೇ ಹೇಳಿ ಕೊಡುವುದು ಪೋಷಕರ ಜವಾಬ್ದಾರಿ. ಪ್ರೇರಣಾದಾಯಕ ವ್ಯಕ್ತಿತ್ವಗಳ ಕಥೆಗಳನ್ನು ಹಂಚಿಕೊಳ್ಳಿ, ಸಾಧನೆಗೆ ಸುದೀರ್ಘ ಪ್ರಯತ್ನ ಬೇಕು ಎಂಬ ನಂಬಿಕೆಯನ್ನು ಬೆಳೆಸಿರಿ. ಆಕರ್ಷಣೆ ತಾತ್ಕಾಲಿಕವಾದದ್ದು, ಗುರಿ ಶಾಶ್ವತ ಎಂಬ ಸಂದೇಶ ನೀಡಿ.
ಪ್ರೀತಿ ಮತ್ತು ಸ್ನೇಹದ ವ್ಯತ್ಯಾಸ ವಿವರಿಸಿ
ಈ ವಯಸ್ಸಿನಲ್ಲಿ ಮಕ್ಕಳಿಗೆ ಈ ಎರಡು ಅಂಶಗಳು ಗೊಂದಲವಿರಬಹುದು. ಪೋಷಕರು ಪ್ರೀತಿ ಮತ್ತು ಸ್ನೇಹದ ನಡುವಿನ ಸ್ಪಷ್ಟ ಭೇದವನ್ನು ತಿಳಿಸಿ. ಪ್ರೀತಿಯ ನಿಜವಾದ ಅರ್ಥ ತಿಳಿಸುವುದು ಮುಖ್ಯ.
ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿರಿ
ಮಕ್ಕಳನ್ನು ಕ್ರೀಡೆ, ಸಂಗೀತ, ನೃತ್ಯ, ಚಿತ್ರಕಲೆ ಅಥವಾ ಸಾಮಾಜಿಕ ಸೇವೆಗಳತ್ತ ಕರೆದೊಯ್ಯುವುದು ಸಹ ಅತ್ಯುತ್ತಮ ಮಾರ್ಗ. ಇಂತಹ ಚಟುವಟಿಕೆಗಳು ಅವರ ಮನಸ್ಸನ್ನು ಸದಾ ಸಕ್ರಿಯವಾಗಿಡುತ್ತವೆ ಮತ್ತು ನಕಾರಾತ್ಮಕ ಆಕರ್ಷಣೆಯಿಂದ ದೂರ ಇಡುತ್ತವೆ.
ಪೋಷಕರು ಮಾರ್ಗದರ್ಶಕರಾಗಲಿ
ಮಕ್ಕಳೊಂದಿಗೆ ಸ್ನೇಹಿತರಂತೆ ಮಾತನಾಡಿ. ಮುಕ್ತ ಮನಸ್ಸಿನಲ್ಲಿ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ಅವಕಾಶ ಕೊಡಿ. ನಿಮ್ಮ ವಿಶ್ವಾಸವು, ಪ್ರೀತಿಯ ಸ್ಪರ್ಶವು ಮಕ್ಕಳನ್ನು ತಪ್ಪು ದಾರಿಯಿಂದ ದೂರ ಇಡಲು ಸಹಾಯ ಮಾಡುತ್ತದೆ.