ಟೀನೇಜ್ (Teenage) ಅನ್ನೋದು ಒಂದು ಸುಂದರ ಅನುಭವ. ಹೊಸ ಭಾವನೆಗಳು, ಏನೋ ಒಂದು ಉತ್ಸಾಹ, ಹಾಗೂ ಕಂಡದ್ದೆಲ್ಲಾ ನಿಜ ಎಂದು ನಂಬುವ ಸಮಯ. ಈ ಹಂತದಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹಲವು ಬದಲಾವಣೆಗಳನ್ನು ಅನುಭವಿಸುತ್ತಾರೆ. ಈ ಟೈಮ್ ನಲ್ಲಿ ಪೋಷಕರಿಂದ ಸ್ಮಾರ್ಟ್ ಮಾರ್ಗದರ್ಶನ ಮತ್ತು ಬೆಂಬಲ ಅಗತ್ಯ. ಹೆತ್ತವರ ಮಾತುಗಳು ಹೆಣ್ಣುಮಕ್ಕಳ ಆತ್ಮವಿಶ್ವಾಸ, ಮಾನಸಿಕ ಆರೋಗ್ಯ ಮತ್ತು ಭವಿಷ್ಯವನ್ನು ರೂಪಿಸಬಲ್ಲವು.
“ನೀನು ತುಂಬಾ ಸುಂದರವಾದವಳು – ಒಳಗೂ ಹೊರಗೂ”
ಅವರು ತಮ್ಮ ದೇಹದ ಬಗ್ಗೆ ಹೇಗೆ ಭಾವಿಸುತ್ತಾರೆ ಎಂಬುದೇ ಅವರ ಆತ್ಮವಿಶ್ವಾಸವನ್ನು ನಿರ್ಧರಿಸಬಹುದು. ಈ ಹಂತದಲ್ಲಿ ಹೆಣ್ಣುಮಕ್ಕಳಲ್ಲಿ ದೇಹವನ್ನು ಕುರಿತು ಅಸಮಾಧಾನ ಇರೋದು ಸಹಜ. ಆಕೆ ಸ್ವತಃ ಅನನ್ಯಳು, ಆಕೆಯ ಮೌಲ್ಯವು ಆಕೆಯ ರೂಪವಲ್ಲ, ಗುಣಗಳಲ್ಲಿ ಇದೆ ಎಂಬುದನ್ನು ಹೇಳಿ.
“ನಿನ್ನ ಅಭಿಪ್ರಾಯಕ್ಕೆ ಮೌಲ್ಯವಿದೆ.”
ಆಕೆ ಏನನ್ನು ಭಾವಿಸುತ್ತಾಳೆ, ಯಾವ ದೃಷ್ಟಿಕೋನ ಹೊಂದಿದ್ದಾಳೆ ಎಂಬುದನ್ನು ತಿಳ್ಕೊಳಿ ಮತ್ತು ಅದನ್ನು ಗೌರವಿಸಿ. ಈ ಮೂಲಕ ಆಕೆ ಬುದ್ಧಿವಂತ, ಆತ್ಮವಿಶ್ವಾಸ ಹೊಂದಿದ ವ್ಯಕ್ತಿಯಾಗಿ ಬೆಳೆಯುತ್ತಾಳೆ.
“ನಿನಗೆ ‘ಇಲ್ಲ’ ಎನ್ನುವ ಹಕ್ಕಿದೆ.”
ಆಕೆಯ ಅನುಮತಿಯ ಮಹತ್ವದ ಬಗ್ಗೆ ತಿಳಿಸಿ. ಅವಳಿಗೆ ಅದು ಸರಿಯಲ್ಲ ಎನಿಸಿದರೆ ನಿರಾಕರಿಸುವ ಹಕ್ಕು ಅವಳಿಗಿದೆ ಎಂಬುದನ್ನು ಮನವರಿಕೆ ಮಾಡಿ. ಇದು ಸ್ನೇಹ, ಸಂಬಂಧ ಅಥವಾ ಯಾವುದೇ ಪರಿಸ್ಥಿತಿಯಾದರೂ ಇರಬಹುದು.
“ನಿನ್ನ ಕನಸುಗಳನ್ನು ಬೆನ್ನಟ್ಟು – ನಾನು ನಿನ್ನೊಂದಿಗಿದ್ದೇನೆ.”
ಮಗುವಿನ ಗುರಿ, ಆಸೆಗಳನ್ನು ಬೆಂಬಲಿಸಿ. ಹೆಣ್ಣುಮಕ್ಕಳಿಗೆ ತಾವು ಯಾವ ಗುರಿಯಾದರು ಸಾಧಿಸಬಲ್ಲೆ ಎಂಬ ನಂಬಿಕೆ ನೀಡಿದರೆ, ಅವರು ಹೆಚ್ಚು ಧೈರ್ಯದಿಂದ ಮುಂದುವರೆಯುತ್ತಾರೆ.
“ತಪ್ಪು ಮಾಡಿದರೂ ಪರವಾಗಿಲ್ಲ – ಅದರಿಂದಲೇ ನಾವು ಕಲಿಯುತ್ತೇವೆ.”
ತಪ್ಪುಗಳನ್ನು ಜೀವನದ ಭಾಗವಾಗಿ ಬೋಧಿಸಿ. ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ, ತಪ್ಪುಗಳಿಂದ ಪಾಠಗಳನ್ನು ಕಲಿಯುವುದು ಎಷ್ಟು ಮುಖ್ಯ ಎನ್ನುವುದನ್ನು ನಿಮ್ಮ ಮಗಳಿಗೆ ಸ್ಪಷ್ಟಪಡಿಸಿ.
ಪೋಷಕರ ಮಾತುಗಳು ಒಂದು ಮಗುವಿನ ಭವಿಷ್ಯಕ್ಕೆ ಗಟ್ಟಿಯಾದ ಅಡಿಪಾಯದಂತೆ. ಪೋಷಕರು ಪ್ರೀತಿ, ಆತ್ಮವಿಶ್ವಾಸ ಮತ್ತು ಮಾರ್ಗದರ್ಶನವನ್ನು ನೀಡಿದಾಗ, ಹೆಣ್ಣುಮಕ್ಕಳು ಧೈರ್ಯದಿಂದ ಮತ್ತು ಜವಾಬ್ದಾರಿಯಿಂದ ಜೀವನವನ್ನು ಎದುರಿಸಲು ತಯಾರಾಗುತ್ತಾಳೆ.