ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗುವಿಗೆ ನೆಗಡಿಯಾಗಿದೆ ಎಂದು ಪೋಷಕರು ವಿಕ್ಸ್ ಹಚ್ಚಿದ ಪರಿಣಾಮ 8 ತಿಂಗಳ ಶಿಶು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಅಬಿರಾಮಪುರಂ ಪ್ರದೇಶದಲ್ಲಿ ಘಟನೆ ನಡೆದಿದೆ. ಮಗುವಿಗೆ ನೆಗಡಿ ಹಾಗೂ ಕೆಮ್ಮಿತ್ತು, ಪೋಷಕರು ಮೂಗಿಗೆ ಹಾಗೂ ಗಂಟಲಿಗೆ ವಿಕ್ಸ್ ಹಚ್ಚಿದ್ದಾರೆ ಇದರಿಂದ ಉಸಿರಾಟ ಸಮಸ್ಯೆಯುಂಟಾಗಿ ಮಗು ಸಾವನ್ನಪ್ಪಿದೆ.
ಅಬಿರಾಮಪುರಂ ನಿವಾಸಿ ರಾಧಾಕೃಷ್ಣನ್ ಪುರಂ ದೇವನಾಥನ್ ಅವರಿಗೆ 8 ತಿಂಗಳ ಹೆಣ್ಣು ಮಗು ಇತ್ತು. ಕಳೆದ ಕೆಲವು ದಿನಗಳಿಂದ ಮಗು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿತ್ತು ಎಂದು ವರದಿಯಾಗಿದೆ. ಈ ಪರಿಸ್ಥಿತಿಯಲ್ಲಿ, ಜುಲೈ 13 ರ ಸಂಜೆ, ದೇವನಾಥನ್ ಮತ್ತು ಅವರ ಕುಟುಂಬ ಸದಸ್ಯರು ಮಗುವಿನ ಮೂಗಿಗೆ ಶೀತವನ್ನು ಕಡಿಮೆ ಮಾಡಲು ವಿಕ್ಸ್ ಮತ್ತು ಕರ್ಪೂರವನ್ನು ಹಚ್ಚಿದ್ದರು.
ಇದಾದ ಸ್ವಲ್ಪ ಸಮಯದ ನಂತರ, ಮಗುವಿಗೆ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಮಗುವನ್ನು ತಕ್ಷಣ ಎಗ್ಮೋರ್ ಸರ್ಕಾರಿ ಮಕ್ಕಳ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಕೂಡಲೇ ಚಿಕಿತ್ಸೆ ನೀಡಲಾಯಿತಾದರೂ ಬದುಕುಳಿಯಲಿಲ್ಲ. ಇಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಗು ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ.