ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳು ಏನನ್ನೋ ನೋಡಿ ಹೆದರಿದ್ದಾರೆ, ಬಂದ ಜ್ವರ ದಿನಗಳಾದ್ರೂ ಹೋಗಿಲ್ಲ ಎಂದು ಪೋಷಕರು ಊದಿನಬತ್ತಿಯಲ್ಲಿ ಚಿಟಿಕೆ ಹಾಕುವ ಕೇಸ್ಗಳನ್ನು ಸುತ್ತಮುತ್ತ ನೋಡಿರುತ್ತೀರಿ. ಇದೇ ರೀತಿ ಮಾಡಲು ಹೋಗು ತಾಯಿಯೊಬ್ಬರು ತಮ್ಮ ಮಗುವನ್ನು ಕಳೆದುಕೊಂಡಿದ್ದರು. ರಾಜ್ಯದಲ್ಲಿ ಈ ಪ್ರಕರಣಗಳು ಹೆಚ್ಚುತ್ತಿವೆ.
ಕನಕಗಿರಿ ತಾಲೂಕಿನ ವಿಠ್ಠಲಾಪುರದಲ್ಲಿ 7 ತಿಂಗಳ ಮಗುವಿಗೆ ಜ್ವರ ಕಡಿಮೆಯಾಗಲಿಲ್ಲ ಎಂದು ಮಗುವಿನ ತಾಯಿ ಡಿ. 4 ರಂದು ಊದುಬತ್ತಿಯಿಂದ ಸುಟ್ಟಿದ್ದಳು. ಬಳಿಕ ಮಗುವಿಗೆ ಚಿಕಿತ್ಸೆ ಕೊಡಿಸಲು ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು. ಬಳಿಕ ಫೆ.2ರಂದು ನಡೆದ ಶಿಶು ಮರಣ ತಡೆಯುವ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾಧಿಕಾರಿ ನಲಿನ್ ಅತುಲ್, ಕೂಡಲೇ ಪಾಲಕರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.
ಈ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಯಲ್ಲಿ ಮಕ್ಕಳು ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿರುವ ಪ್ರಕರಣಗಳನ್ನು ಪತ್ತೆ ಮಾಡಿದಾಗ, ಜ್ವರ ಬಂದ ಮಕ್ಕಳಿಗೆ ಪೋಷಕರು ಊದುಬತ್ತಿಯಿಂದ ಸುಟ್ಟಿರುವುದು ಗೊತ್ತಾಗಿದೆ. ಹೀಗಾಗಿ, ಈ ಕುರಿತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿ ಈ ಮಕ್ಕಳ ಬಗ್ಗೆ ನಿಗಾವಹಿಸಿ ಮತ್ತು ಪ್ರಕರಣವನ್ನು ದಾಖಲಿಸುವಂತೆ ಸೂಚಿಸಿದ್ದಾರೆ.
ಊದುಬತ್ತಿಯಿಂದ ಮಕ್ಕಳಿಗೆ ಸುಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯಇಲಾಖೆಯಿಂದ 18 ಪ್ರಕರಣಗಳು ದಾಖಲಾಗಿದೆ. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದ್ದಾರೆ.
ಜಗತ್ತು ಬಹಳ ಮುಂದೆ ಸಾಗುತ್ತಿದ್ದರೂ ವಿಠಲಾಪುರದ ಗ್ರಾಮಸ್ಥರು ಇನ್ನೂ ಮೂಢನಂಬಿಕೆಯನ್ನು ನಂಬುತ್ತಿದ್ದಾರೆ. ವೈದ್ಯಕೀಯ ಅಗತ್ಯಗಳನ್ನು ಅರ್ಥಮಾಡಿಕೊಳ್ಳದೆ ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಜ್ವರ ಪೀಡಿತ ಮಕ್ಕಳಿಗೆ ಊದುಬತ್ತಿಯಿಂದ ಸುಡುವ ನಂಬಿಕೆ ಕೇಳಿ ನಮಗೆ ಆಶ್ಚರ್ಯವಾಯಿತು. ಈ ರೀತಿಯ ಸಲಹೆ ನೀಡುವವರನ್ನು ಬಂಧಿಸಬೇಕೆಂದು ಅಧಿಕಾರಿಗಳು ಹೇಳಿದ್ದಾರೆ.
ಕನಕಗಿರಿ ತಾಲ್ಲೂಕು ಆಡಳಿತದ ಅಧಿಕಾರಿಯೊಬ್ಬರು ಮಾತನಾಡಿ, ತಪ್ಪು ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲು ಜಿಲ್ಲಾಧಿಕಾರಿ ನಮಗೆ ಸೂಚಿಸಿದ್ದಾರೆ. ಸೂಚನೆ ಹಿನ್ನೆಲೆಯಲ್ಲಿ ಜಾಗೃತರಾಗಿದ್ದು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡತ್ತಿದ್ದೇವೆಂದು ತಿಳಿಸಿದ್ದಾರೆ.