April 11, 2026
Saturday, April 11, 2026
spot_img

ಚಿಕಿತ್ಸೆ ಕೊಡಿಸುವ ಬದಲು 10 ವರುಷಗಳಿಂದ ಸ್ವಂತ ಮಗಳನ್ನೇ ಸರಪಳಿಯಲ್ಲಿ ಬಂಧಿಸಿದ ಹೆತ್ತವರು!

ಹೊಸದಿಗಂತ ಬೆಳಗಾವಿ:

ಜಗತ್ತು ತಂತ್ರಜ್ಞಾನದ ತುತ್ತತುದಿಯಲ್ಲಿದ್ದರೂ, ಮೌಢ್ಯದ ಬೇರುಗಳು ಎಷ್ಟು ಆಳವಾಗಿವೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ಕಾಗವಾಡದ ಈ ಘಟನೆ ಸಾಕ್ಷಿಯಾಗಿದೆ. ಬಾನಾಮತಿಯೆಂಬ ಕುರುಡು ನಂಬಿಕೆಗೆ ಬಲಿಯಾದ ಪೋಷಕರು, ಸ್ವಂತ ಮಗಳನ್ನೇ ಕಳೆದ 10 ವರ್ಷಗಳಿಂದ ಸರಪಳಿಯಿಂದ ಕಟ್ಟಿಹಾಕಿ ಗೃಹಬಂಧನದಲ್ಲಿಟ್ಟಿರುವ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಕಾಗವಾಡ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ರಾಯ ಎಂಬುವವರ ಮಗಳು ಸ್ನೇಹಾ, ಹತ್ತು ವರ್ಷಗಳ ಹಿಂದೆ ಎಲ್ಲರಂತೆ ಉತ್ಸಾಹದಿಂದ ಕಾಲೇಜಿಗೆ ಹೋಗುತ್ತಿದ್ದ ಯುವತಿ. ಆದರೆ, ಹಠಾತ್ತನೆ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿತ್ತು. ವಿಚಿತ್ರವಾಗಿ ವರ್ತಿಸುವುದು, ಕುಣಿಯುವುದು ಮಾಡುತ್ತಿದ್ದ ಮಗಳನ್ನು ಕಂಡು ಪೋಷಕರು ವೈದ್ಯರ ಬಳಿ ಕರೆದೊಯ್ಯುವ ಬದಲು ಸ್ವಾಮೀಜಿಯೊಬ್ಬರ ಮೊರೆ ಹೋಗಿದ್ದರು.

“ನಿಮ್ಮ ಮಗಳಿಗೆ ಯಾರೋ ಮಾಟ-ಮಂತ್ರ ಮಾಡಿಸಿದ್ದಾರೆ, ಇದನ್ನು ಹೋಗಲಾಡಿಸಲು ಲಕ್ಷಾಂತರ ರೂಪಾಯಿ ಬೇಕು” ಎಂದು ಸ್ವಾಮೀಜಿ ಹೇಳಿದ್ದನ್ನು ನಂಬಿದ ತಂದೆ ಸಿದ್ರಾಯ, ಅಂದಿನಿಂದ ಮಗಳನ್ನು ಮನೆಯಲ್ಲೇ ಕಟ್ಟಿಹಾಕಿದ್ದಾರೆ. ಸರಪಳಿ ಬಿಚ್ಚಿದರೆ ಕಲ್ಲು ಎಸೆಯುತ್ತಾಳೆ, ಓಡಿ ಹೋಗುತ್ತಾಳೆ ಎಂಬ ಕಾರಣ ನೀಡಿ ಆಕೆಯ ಕೈಗಳಿಗೆ ಬೇಡಿ ತೊಡಿಸಲಾಗಿದೆ.

ಮಾನಸಿಕ ಅಸ್ವಸ್ಥತೆಗೆ ಸೂಕ್ತ ಮನೋವೈದ್ಯಕೀಯ ಚಿಕಿತ್ಸೆ ಕೊಡಿಸುವುದು ಬಿಟ್ಟು, ದಶಕದ ಕಾಲ ಯುವತಿಯನ್ನು ಪ್ರಾಣಿಯಂತೆ ಕಟ್ಟಿಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮೌಢ್ಯದ ಹೆಸರಲ್ಲಿ ನಡೆಯುತ್ತಿರುವ ಈ ದೌರ್ಜನ್ಯವನ್ನು ತಡೆದು, ಯುವತಿಗೆ ಕೂಡಲೇ ವೈದ್ಯಕೀಯ ನೆರವು ಹಾಗೂ ನ್ಯಾಯ ಕೊಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !