ಪೋಷಕರೇ ಗಮನಿಸಿ, ದಕ್ಷಿಣ ಕನ್ನಡದ 6 ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪತ್ತೆ: ಇದಕ್ಕೆಲ್ಲಾ ಒಂದೇ ಕಾರಣ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೋಷಕರೇ ಗಮನಿಸಿ, ದಕ್ಷಿಣ ಕನ್ನಡದ 6 ಸಾವಿರ ಮಕ್ಕಳಲ್ಲಿ ದೃಷ್ಟಿ ಸಮಸ್ಯೆ ಪತ್ತೆಯಾಗಿದೆಯಂತೆ! ಹೌದು,
ಸರಿಸುಮಾರು 5 ಸಾವಿರ ಮಕ್ಕಳಿಗೆ ಕನ್ನಡಕ ಅನಿವಾರ‍್ಯವಾಗಿದೆ.

ಕೇಳಿದ್ರೆ ಭಯ ಆಗ್ಬೋದು ಅಲ್ವಾ? ಆದರೆ ಇದೇ ಫ್ಯಾಕ್ಟ್‌, ಖಾಸಗಿ ಶಾಲೆ, ಸರ್ಕಾರಿ ಶಾಲೆ ಬೇಧವಿಲ್ಲದೆ ಮಕ್ಕಳಲ್ಲಿ ದೃಷ್ಟಿ ದೋಷ ಕಾಣಿಸಿಕೊಳ್ಳುತಿದೆ ಎಂದರೆ ಇದಕ್ಕೆ ಮಕ್ಕಳ ಪ್ರೀತಿಯ ಮೊಬೈಲ್‌ ಕಾರಣವಾಗಿದೆ ಎನ್ನುತ್ತದೆ  ಆರೋಗ್ಯ ಇಲಾಖೆ.

6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಾಗಿದ್ದು, ಕೆಲವು ಮಕ್ಕಳಲ್ಲಿ ಸೌಮ್ಯ ದೃಷ್ಟಿ ಸಮಸ್ಯೆಗಳಿದ್ದರೆ, ಇನ್ನು ಕೆಲವು ಮಕ್ಕಳಿಗೆ ಚಿಕಿತ್ಸೆ ಅನಿವಾರ್ಯ ಎನ್ನುವ ಮಟ್ಟಿಗೆ ಇದೆ. ಮೊಬೈಲ್ ಫೋನ್‌ಗಳನ್ನು ಬಳಸುವ ಸಮಯವನ್ನು ಮಿತಿಗೊಳಿಸುವಂತೆ ಪೋಷಕರಿಂದ ಪದೇ ಪದೇ ಎಚ್ಚರಿಕೆಗಳ ಹೊರತಾಗಿಯೂ, ಅನೇಕ ಮಕ್ಕಳು ಈ ಸಲಹೆಯನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ.

ಇದು ಕಿರಿಯ ಮಕ್ಕಳಲ್ಲಿ ದೃಷ್ಟಿ ಸಮಸ್ಯೆಗಳ ತೀವ್ರತೆ ಹೆಚ್ಚಿಸುತ್ತದೆ. ಕೋವಿಡ್‌ ಬಳಿಕ ಮಕ್ಕಳಲ್ಲಿ ಮೊಬೈಲ್‌ ಪ್ರೀತಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಬರೀ ಕಣ್ಣಿನ ದೋಷದ ಸಮಸ್ಯೆಯ ಜತೆಯಲ್ಲಿ ಹತ್ತಾರು ಆರೋಗ್ಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿ ವಿಚಾರವಾಗಿ ಮಾರ್ಪಟ್ಟಿದೆ. ಮಕ್ಕಳು ಮನೆ ಬಿಟ್ಟು ಹೊರಗೇ ಬಾರದೇ ಬರೀ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಾರೆ. ಇದು ಅವರ ಬೆಳವಣಿಗೆ ಮೇಲೆ ಸದ್ದಿಲ್ಲದೇ ಕೆಟ್ಟ ಪರಿಣಾಮ ಬೀರುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಾನಸಿಕ ಸಮಸ್ಯೆ ಅದರಲ್ಲೂ ವಿಶೇಷವಾಗಿ ಮೊಬೈಲ್‌ ಚಟವನ್ನು ಆದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮನೋಸ್ಥೈರ್ಯ ಎನ್ನುವ ಕಾರ‍್ಯಕ್ರಮ ಮಾಡಿದೆ. ಶಿಕ್ಷಣ ಇಲಾಖೆಯ ಕಡೆಯಿಂದ ಈ ವಿಚಾರಕ್ಕೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.  ಮೊಬೈಲ್‌ ವ್ಯಸನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾನಾ ತಂತ್ರಗಾರಿಕೆಯನ್ನು ಹೆಣೆದರೂ ಕೂಡ ಮಕ್ಕಳು ಇದರ ವ್ಯಾಮೋಹಕ್ಕೆ ಬಿದ್ದಿದ್ದಾರೆ. ಅವರನ್ನು ಮೊಬೈಲ್‌ ಲೋಕದಿಂದ ಬಿಡಿಸುವುದು ಕೂಡ ಬಹಳ ಕಷ್ಟಕರವಾಗುತ್ತಿದೆ. ಮೊಬೈಲ್‌ ಕೊಡುವ ವಿಚಾರದಲ್ಲಿ ಮುಂಜಾಗ್ರತೆ ವಹಿಸುವುದು ಒಂದೇ ದಾರಿ ಎನ್ನುತ್ತಾರೆ ಮನೋಸ್ಥೈರ್ಯ ಕಾರ‍್ಯಕ್ರಮದ ಅಧಿಕಾರಿ ಡಾ. ಸುದರ್ಶನ್‌.

ಸಾಕಷ್ಟು ಮಕ್ಕಳನ್ನು ಹೆತ್ತವರು ಮೊಬೈಲ್‌ ಬಿಡಿಸುವ ವಿಚಾರದಲ್ಲಿ ಕೌನ್ಸೆಲಿಂಗ್‌ ಮಾಡಿಸಲು ಬರುತ್ತಿದ್ದಾರೆ. ಮೊಬೈಲ್‌ನಿಂದ ಮಕ್ಕಳಲ್ಲಿ ಬರೀ ಕಣ್ಣು, ಮಾನಸಿಕ ಸಮಸ್ಯೆಗಳು ಮಾತ್ರವಲ್ಲ ಬುದ್ಧಿಮತ್ತೆ, ನಿದ್ರಾಹೀನತೆ, ಭಾಷಾ ಬೆಳವಣಿಗೆ ಕುಂಠಿತ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿರುವುದು ಬಹಳಷ್ಟು ಆತಂಕದ ಸ್ಥಿತಿಯಿದೆ ಎಂದು ಮಂಗಳೂರಿನ ಖ್ಯಾತ ಮನೋಶಾಸ್ತ್ರಜ್ಞ ಡಾ. ಕಿರಣ್‌ ಕುಮಾರ್‌ ಪಿ.ಕೆ ಹೇಳುತ್ತಾರೆ.

ಶಾಲೆಗಳಲ್ಲಿ ಮೊಬೈಲ್‌ ಬಳಕೆ ಪೂರ್ಣವಾಗಿ ನಿಷೇಧ ಹೇರಲಾಗಿದೆ. ಆದರೆ ಅದರ ಬಳಕೆಯನ್ನು ಮಕ್ಕಳು ಮನೆಯಲ್ಲಿ ಮಾಡಬಹುದು ಅಥವಾ ಇತರ ಕಡೆಯಲ್ಲಿ ಹೆಚ್ಚಾಗಿ ಮಾಡುತ್ತಾರೆ. ಶಾಲೆಯಲ್ಲಿ ನಿರಂತರವಾಗಿ ಮೊಬೈಲ್‌ ಬಳಕೆಯನ್ನು ಮಾಡದಂತೆ ಜಾಗೃತಿ, ಮಾಹಿತಿಯನ್ನು ಶಿಕ್ಷಕರು ನೀಡುತ್ತಿದ್ದಾರೆ. ಆದರೆ ಮೊಬೈಲ್‌ ಬಳಕೆಯಂತೂ ಕಡಿಮೆಯಾಗುತ್ತಿಲ್ಲ ಎನ್ನುವುದು ಬೇಸರದ ವಿಚಾರ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!