ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಣದ ಅಮಲಿಗಾಗಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ್ದ ತಾಯಿ ಮತ್ತು ಮಲತಂದೆಯ ಅಮಾನವೀಯ ಕೃತ್ಯ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಚಂದ್ರಾ ಲೇಔಟ್ ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಈ ಕರಾಳ ದಂಧೆ ಪತ್ತೆಯಾಗಿದ್ದು, 15 ವರ್ಷದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಲಾಗಿದೆ. ಮಗಳನ್ನೇ ಅಕ್ರಮ ಕೂಪಕ್ಕೆ ತಳ್ಳಿದ ತಾಯಿ, ಮಲತಂದೆ ಹಾಗೂ ಇವರಿಗೆ ಸಹಕರಿಸುತ್ತಿದ್ದ ವಾಣಿ ಎಂಬ ಮತ್ತೋರ್ವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ದಂಪತಿಗಳು ಪ್ರತಿದಿನ ಬೆಳಿಗ್ಗೆ ತಮ್ಮ ಮಗಳನ್ನು ಕಾರಿನಲ್ಲಿ ಆರೋಪಿ ವಾಣಿಯ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತಿದ್ದರು. ಸಂಜೆಯವರೆಗೂ ಬಾಲಕಿ ಗ್ರಾಹಕರ ದೈಹಿಕ ಕಿರುಕುಳ ಅನುಭವಿಸುತ್ತಿದ್ದಳು. ವಾಣಿ ಎಂಬಾಕೆ ಗ್ರಾಹಕರಿಂದ ತಲಾ 6 ರಿಂದ 10 ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಳು. ಇದರಲ್ಲಿ ಅರ್ಧದಷ್ಟು ಹಣವನ್ನು ತಾಯಿಗೆ ಕಮಿಷನ್ ರೂಪದಲ್ಲಿ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ಸತ್ಯ ತನಿಖೆಯಲ್ಲಿ ಹೊರಬಂದಿದೆ.
ಸದ್ಯ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಂದ್ರಾ ಲೇಔಟ್ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.



