ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ನಲ್ಲಿಭಾರತ ಸದ್ಯ 2 ಪದಕಗಳ ನಿರೀಕ್ಷೆಯಲ್ಲಿದೆ. 10 ಮೀಟರ್ ಮಹಿಳಾ ಏರ್ ರೈಫಲ್ ಸ್ಪರ್ಧೆಯಲ್ಲಿ ಶೂಟರ್ ರಮಿತಾ ಜಿಂದಾಲ್ 631.5 ಅಂಕ ಗಳಿಸಿ 5 ನೇ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
ಅನುಭವಿ ಶೂಟರ್ ಎಲವೆನಿಲ್ ವಲರಿವನ್ 630.7 ಅಂಕ ಗಳಿಸಿ 10ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 8 ಮಂದಿಗೆ ಫೈನಲ್ ಪ್ರವೇಶ ಲಭಿಸಿತು.
ಇಂದು ನಡೆಯುವ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಫೈನಲ್‌ನಲ್ಲಿ ಭಾರತದ ಚೊಚ್ಚಲ ಪದಕದ ಗುರಿಯೊಂದಿಗೆ ಮನು ಭಾಕರ್ ಕಣಕ್ಕಿಳಿಯಲಿದ್ದಾರೆ.
ರಮಿತಾ ಕಳೆದ 20 ವರ್ಷಗಳಲ್ಲಿ ಮನು ಭಾಕರ್ ನಂತರ ಪದಕ ಸುತ್ತಿಗೆ ತಲುಪಿದ ಎರಡನೇ ಮಹಿಳಾ ಶೂಟರ್ ಎನಿಸಿಕೊಂಡರು. ರಮಿತಾ ತನ್ನ ಕೋಚ್ ಸುಮಾ ಶಿರೂರ್ (ಅಥೆನ್ಸ್ 2004) ನಂತರ ಒಲಿಂಪಿಕ್ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ರೈಫಲ್ ಶೂಟರ್ ಆಗಿದ್ದಾರೆ. ಎಲವೆನಿಲ್ ವಲರಿವನ್ ಆರಂಭಿಕ ಮೂರು ಸೆಟ್ಗಳಲ್ಲಿ ಅಗ್ರ 8ರೊಳಗೆ ಕಾಣಿಸಿಕೊಂಡಿದ್ದರೂ ಕೂಡ ಅಂತಿಮ ಮೂರು ಸೆಟ್ಗಳಲ್ಲಿ ಹಿನ್ನಡೆ ಕಂಡು ಫೈನಲ್ ಅವಕಾಶ ತಪ್ಪಿಸಿಕೊಂಡರು. ಕನಿಷ್ಠ 8ನೇ ಸ್ಥಾನ ಪಡೆಯುತ್ತಿದ್ದರೂ ಕೂಡ ಅವರಿಗೆ ಫೈನಲ್ ಟಿಕೆಟ್ ಲಭಿಸುತ್ತಿತ್ತು.