ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿಯುವ ನಿರೀಕ್ಷೆಯಿದೆ. ಬುಧವಾರ ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್ ಅರ್ಹತಾ ಸುತ್ತಿನಲ್ಲಿ ಭಾರತದ ಸ್ವಪ್ನಿಲ್ ಕುಸಾಲೆ 590 ಅಂಕಗಳೊಂದಿಗೆ 7 ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಇನ್ನೊಂದೆಡೆ ಅವಳಿ ಒಲಿಂಪಿಕ್ಸ್ ಪದಕ ವಿಜೇತೆ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಕೂಡ ಗೆಲುವು ಸಾಧಿಸಿ 16ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.
ಇಂದು(ಬುಧವಾರ) ನಡೆದ ಪುರುಷರ 50 ಮೀ. ರೈಫಲ್ 3 ಪೊಸಿಶನ್ ಸ್ಪರ್ಧೆಯಲ್ಲಿ ಕಣಕ್ಕಿಳಿದಿದ್ದ ಸ್ವಪ್ನಿಲ್ ಕುಸಾಲೆ ಫೈನಲ್ ಸುತ್ತಿಗೆ ಪ್ರವೇಶ ಪಡೆದರೆ, ಮತೋರ್ವ ಭಾರತೀಯ ಶೂಟರ್ ಐಶ್ವರಿ ಪ್ರತಾಪ್ ಅವರು 589 ಸ್ಕೋರ್‌ನೊಂದಿಗೆ 11 ನೇ ಸ್ಥಾನ ಪಡೆದು ಟೂರ್ನಿಯಿಂದ ಹೊರಬಿದ್ದರು. ಅಗ್ರ 8 ಸ್ಥಾನ ಗಳಿಸಿದ ಶೂಟರ್ಗಳಿಗೆ ನೇರವಾಗಿ ಫೈನಲ್ ಪ್ರವೇಶ ಲಭಿಸುತ್ತದೆ. ಆದರೆ ಈ ಸ್ಥಾನ ಪಡೆಯುವಲ್ಲಿ ವಿಫಲರಾದ ಕಾರಣ ಅವರ ಒಲಿಂಪಿಕ್ಸ್ ಸ್ಪರ್ಧೆ ಕೊನೆಗೊಂಡಿತು.
ಸ್ವಪ್ನಿಲ್ ಕುಸಾಲೆ ಫೈನಲ್ ಪ್ರವೇಶಿಸುವ ಮೂಲಕ ಮನು ಭಾಕರ್, ಅರ್ಜುನ್ ಬಾಬುತಾ, ಸರಬ್ಜೋತ್ ಸಿಂಗ್ ಮತ್ತು ರಮಿತಾ ಜಿಂದಾಲ್ ಬಳಿಕ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದ 5ನೇ ಶೂಟರ್ ಎನಿಸಿಕೊಂಡರು. ಆಗಸ್ಟ್ 1 ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಸ್ವಪ್ನಿಲ್ ಪದಕಕ್ಕೆ ಗುರಿ ನೀಡುವ ನಿರೀಕ್ಷೆ.
ಪ್ರೀ ಕ್ವಾರ್ಟರ್ ಗೆ ಸಿಂಧು
ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ‘ಎಂ’ ಗುಂಪಿನ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ 10ನೇ ಶ್ರೇಯಾಂಕದ ಸಿಂಧು, 73ನೇ ಶ್ರೇಯಾಂಕದ ಎಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10 ಸುಲಭ ಜಯ ಸಾಧಿಸಿ 16ರ(ಪ್ರೀ ಕ್ವಾರ್ಟರ್) ಸುತ್ತಿಗೇರಿದ್ದಾರೆ.