ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನಲ್ಲಿ ಸೋಮವಾರ ಬೆಳಗ್ಗೆ ಕಡಿಮೆಯಾಗಿದ್ಧ ಮಳೆ, ರಾತ್ರಿ ವೇಳೆ ಮತ್ತೆ ಅಬ್ಬರಿಸಿದ್ದು ಮಳೆಯ ಅಬ್ಬರಕ್ಕೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದ ಆವರಣದಲ್ಲಿರುವ ರೋಟರಿ ಮಕ್ಕಳ ಉದ್ಯಾನವನದ ಕಂಪೌಂಡ್ ಗೋಡೆ ಕುಸಿದು ಬಿದ್ದಿದೆ.
ಕುಮಟಾ ರಸ್ತೆಗೆ ಹೊಂದಿಕೊಂಡು ಇರುವ ಮಕ್ಕಳ ಉದ್ಯಾನವನದ ಕಂಪೌಂಡ್ ರಾತ್ರಿ ಸಮಯದಲ್ಲಿ ಕುಸಿದಿದ್ದು ಕಲ್ಲುಗಳು ರಸ್ತೆಯ ಪಕ್ಕದಲ್ಲಿ ಬಿದ್ದಿವೆ.
ಜನ ಸಂಚಾರ ಇರುವ ಸಮಯದಲ್ಲಿ ಕುಸಿತ ಉಂಟಾಗಿದ್ದರೆ, ರಸ್ತೆ ಬದಿಯಲ್ಲಿ ಸಂಚರಿಸುವವರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ರಾತ್ರಿ ವೇಳೆ ಅವಘಡ ನಡೆದಿರುವುದರಿಂದ ಭಾರೀ ಅಪಾಯ ತಪ್ಪಿದೆ.
ಆವರಣ ಗೋಡೆಗೆ ಹೊಂದಿಕೊಂಡಂತೆ ಉಯ್ಯಾಲೆ, ಜಾರುಬಂಡಿ ಮೊದಲಾದ ಮಕ್ಕಳ ಆಟಿಕೆಗಳಿದ್ದು ಅಡಿಯಲ್ಲಿನ ಮಣ್ಣು ಕುಸಿದರೆ ಉರುಳಿ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.