ಸಂಸತ್​ಗೆ ಡಾ.ಕೆ. ಸುಧಾಕರ್ ಪ್ರವೇಶ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರದೀಪ್​ ಈಶ್ವರ್​?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್​, ಕಾಂಗ್ರೆಸ್​ನ ರಕ್ಷಾ ರಾಮಯ್ಯ ಎದುರು 1,62,099 ಮತಗಳ ಅಂತರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಸುಧಾಕರ್​ ಗೆಲುವಿನ ಬೆನ್ನಲ್ಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪ್ರದೀಪ್​ ಈಶ್ವರ್​ಗೆ ಜನ ಆಗ್ರಹಿಸಿದ್ದರು.

ಇದಕ್ಕೆ ಕಾರಣ ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಸುಧಾಕರ್‌ ವಿರುದ್ಧ ಸವಾಲೆಸೆದಿದ್ದ ಪ್ರದೀಪ್‌ ಈಶ್ವರ್‌, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರಕ್ಕಿಂತ ಒಂದು ವೋಟ್‌ ಲೀಡ್‌ ಬಂದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದರು.

ಈಗ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಕಾರಣ ಅವರ ರಾಜೀನಾಮೆ ಪತ್ರವೊಂದು ವೈರಲ್ ಆಗಿದೆ.

ಇದೀಗ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಅವರು ಗೆಲುವು ಸಾಧಿಸಿ ಸಂಸತ್​ಗೆ ಪ್ರವೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಜೀನಾಮೆ ಮುನ್ನೆಲೆಗೆ ಬಂದಿದೆ. ರಾಜೀನಾಮೆ ಪತ್ರವೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಶಾಸಕ ಸ್ಥಾನಕ್ಕೆ ಪ್ರದೀಪ್​ ಈಶ್ವರ್​ ರಾಜೀನಾಮೆ ನೀಡಿರುವುದಾಗಿ ಯಾವುದೇ ಅಧಿಕೃತ ಸುದ್ದಿ ಮೂಲಗಳು ತಿಳಿಸಿಲ್ಲ. ಸಭಾಧ್ಯಕ್ಷ ಯು.ಟಿ. ಖಾದರ್​ ಅವರ ಕಚೇರಿ ಹಾಗೂ ಶಾಸಕರ ಕಚೇರಿ ಸಿಬ್ಬಂದಿ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.

ಪತ್ರದಲ್ಲೇನಿದೆ?
ಬಾಲ್ಯದಿಂದಲೇ ಪುಣ್ಯ ಕೋಟಿ ಕಥೆಯನ್ನು ಆದರ್ಶವಾಗಿರಿಸಿಕೊಂಡು, ‘ಕೊಟ್ಟ ಮಾತು- ಇಟ್ಟ ಹೆಜ್ಜೆ ತಪ್ಪಬಾರದು’ ಅನ್ನೋ ಮಾತನ್ನು ಜೀವನದುದ್ದಕ್ಕೂ ಪಾಲಿಸುತ್ತಾ ಬಂದವನು ನಾನು. ನಾನು ಕೆಲ ದಿನಗಳ ಹಿಂದೆ ಮಾಜಿ ಸಚಿವರಾದ ಡಾ.ಕೆ ಸುಧಾಕರ್ ಅವರು ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಒಂದು ಮತವನ್ನು ಲೀಡ್ ತೆಗೆದುಕೊಂಡರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಾರ್ವಜನಿಕವಾಗಿ ಹೇಳಿರುತ್ತೇನೆ. ಸುಧಾಕರ್ ಅವರು ಸುಮಾರು 20 ಸಾವಿರ ಮತಗಳನ್ನು ನನ್ನ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿರುವುದರಿಂದ ನಾನು ಹಿಂದೆ ಆಡಿದ ಮಾತಿಗೆ ಬದ್ಧನಾಗಿ ಸ್ವಇಚ್ಛೆಯಿಂದ ನನ್ನ ವಿಧಾನಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡುತ್ತಿದ್ದೇನೆ ಎಂದು ಸ್ಪೀಕರ್​ ಯುಟಿ ಖಾದರ್​ ಅವರಿಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!