ಹೊಸ ದಿಗಂತ ಡಿಜಿಟಲ್:
ದೇಶದಲ್ಲಿ ಸಂಸತ್ತೇ ಪರಮೋಚ್ಛ, ಸಂಸತ್ತನ್ನು ಮೀರಿದ ಅಧಿಕಾರದ ಕುರಿತಾಗಿ ಸಂವಿಧಾನದಲ್ಲಿ ಎಲ್ಲೂ ಉಲ್ಲೇಖವಿಲ್ಲ. ಹೀಗಾಗಿ ಸಂಸತ್ತು ದೇಶದ ಪ್ರತಿಯೊಬ್ಬ ವ್ಯಕ್ತಿಯಂತೆ ಪರಮೋಚ್ಛವಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತೆ ಹೇಳಿದ್ದಾರೆ. ಈ ಮೂಲಕ ಸುಪ್ರೀಂ ಕೋರ್ಟ್ ವಿರುದ್ಧ ಅವರು ಮತ್ತೊಮ್ಮೆ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಲಯಗಳು ಸೂಪರ್ ಪಾರ್ಲಿಮೆಂಟ್ ಆಗಬಾರದು. ಈಗ ಕಾರ್ಯಾಂಗ ಮತ್ತು ಶಾಸಕಾಂಗದ ಜಾಗದಲ್ಲಿ ನ್ಯಾಯಾಂಗದ ಪ್ರವೇಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಈ ಹಿಂದೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುವ ಸಂದರ್ಭ ಮತ್ತೊಮ್ಮೆ ನ್ಯಾಯಾಲಯದ ಹೆಜ್ಜೆಯ ಬಗ್ಗೆ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
1977ರಲ್ಲಿ ತುರ್ತು ಪರಿಸ್ಥಿತಿ ಹೇರಿದ ಘಟನೆಯಲ್ಲಿ ಪ್ರಧಾನಿಯನ್ನು ಹೊಣೆಗಾರರನ್ನಾಗಿ ಮಾಡಲಾಯಿತು. ಇದರಿಂದ ಜನರಿಗಾಗಿ ಇರುವ ಸಂವಿಧಾನ ಹೇಗಿರಬೇಕು ಎಂಬುದರ ಬಗ್ಗೆ ಚುನಾಯಿತ ಜನಪ್ರತಿನಿಧಿಗಳು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ನ್ಯಾಯಾಧೀಶರು ದೇಶದ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡುವ ಪರಿಸ್ಥಿತಿ ತಂದುಕೊಳ್ಳಬಾರದು. ಇಂತಹ ಬೆಳವಣಿಗೆ ರಾಷ್ಟ್ರದ ಅತ್ಯುನ್ನತ ಕಚೇರಿಯ ಸಾಂವಿಧಾನಿಕ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಕೂಡಾ ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟಿದ್ದಾರೆ.