ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ ಭದ್ರತಾ ಲೋಪ ಪ್ರಕರಣ ಹಿನ್ನೆಲೆಯಲ್ಲಿ ಸ್ಮೋಕ್ ಬಾಂಬ್ ಎಸೆದ ಮೈಸೂರಿನ ಮನೋರಂಜನ್ ಮನೆಗೆ ದೆಹಲಿ ಪೊಲೀಸರು ಆಗಮಿಸಿದ್ದಾರೆ.
ಸುಮಾರು ಏಳು ಗಂಟೆಗಳ ಕಾಲ ಮನೋರಂಜನ್ ಕುಟುಂಬದವರ ವಿಚಾರಣೆ ನಡೆಸಲಾಗಿದೆ. ದೆಹಲಿ ಪೊಲೀಸರು ಹಾಗೂ ಗುಪ್ತಚರದಳದ ನಾಲ್ವರು ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.
ತಾಯಿ ಶೈಲಜಾ ಹಾಗೂ ತಂದೆ ದೇವರಾಜಗೌಡ ಅವರ ತೀವ್ರ ವಿಚಾರಣೆ ನಡೆಸಲಾಗಿದೆ. ಮನೋರಂಜನ್ ರೂಮ್‌ಗೆ ತೆರಳಿ ಅಲ್ಲಿರುವ ಪುಸ್ತಕಗಳು, ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಎರಡನೇ ಮಹಡಿಯಲ್ಲಿ ಮನೋರಂಜನ್ ಇರುತ್ತಿದ್ದ, ಊಟ, ತಿಂಡಿಗಷ್ಟೇ ಮನೆಗೆ ಬಂದು ಹೋಗುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ. ಬೆಳಗ್ಗೆ ಎದ್ದು ಪಾರ್ಕ್‌ಗೆ ಹೋಗ್ತಿದ್ದ, ತಿಂಡಿ ಮುಗಿಸಿ ರೂಂ ಹೊಕ್ಕರೆ ಮಧ್ಯಾಹ್ನ ಮನೆಗೆ ಬರುತ್ತಿದ್ದ, ಊಟ ಮುಗಿಸಿ ಮತ್ತೆ ರೂಂ ಸೇರುತ್ತಿದ್ದ, ಮತ್ತೆ ರಾತ್ರಿ ಊಟಕ್ಕೆ ಮನೆಗೆ ಬರುತ್ತಿದ್ದ. ನಮ್ಮ ಬಳಿ ಯಾವಾಗಲೂ ಹೆಚ್ಚು ದುಡ್ಡು ಕೇಳಿಲ್ಲ. ಅಪರೂಪಕ್ಕೆ ಒಂದೆರಡು ಸಾವಿರ ಕೊಡುತ್ತಿದ್ದೆವು ಎಂದು ಪೋಷಕರು ಮಾಹಿತಿ ನೀಡಿದ್ದಾರೆ.
ಮಗ ಈ ರೀತಿ ಮಾಡಿದ್ದು ಯಾಕೆ ಎಂಬುದೇ ನಮಗೆ ಅರ್ಥವಾಗುತ್ತಿಲ್ಲ, ಈ ನಡೆ ಬೇಸರ ತಂದಿದೆ ಎಂದು ತಂದೆ ದೇವರಾಜಗೌಡ ಹೇಳಿದ್ದಾರೆ.