ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಮಾನದಲ್ಲಿ ಪ್ರಯಾಣಿಕರ ನಡುವೆಯೇ ಓರ್ವ ಪ್ರಯಾಣಿಕ ಮೂತ್ರ ಮತ್ತು ಮಲ ವಿಸರ್ಜನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಜೂನ್ 24,2023 ರಂದು ಮುಂಬೈನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ AIC 866 ರಲ್ಲಿ ಪ್ರಯಾಣಿಕ ರಾಮ್ ಸಿಂಗ್ ಸೀಟ್ ಸಂಖ್ಯೆ 17Fನಲ್ಲಿ ಕುಳಿತಿದ್ದರು. ಆತ ಪ್ರಯಾಣಿಕರ ನಡುವೆಯೇ ಮೂತ್ರ ವಿಸರ್ಜನೆ ಮತ್ತು ಮಲವಿಸರ್ಜನೆ ಮಾಡಿದ್ದಾನೆ. ಅಷ್ಟೇ ಅಲ್ಲ ಆತನ ಪ್ರಯಾಣದ ಉದ್ದಕ್ಕೂ ಉಗುಳುತ್ತಿದ್ದನು ಎಂದು ಹೇಳಲಾಗುತ್ತಿದೆ. ಇನ್ನು ಆರೋಪಿ ಕ್ಯಾಬಿನ್ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿದ್ದು, ಆತನ ಗಲಾಟೆ ಬಹಳ ಹೊತ್ತು ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಕನ ಅಸಭ್ಯ ವರ್ತನೆ ಗಮನಸಿದ ಸಿಬ್ಬಂದಿ ತಕ್ಷಣವೇ ವಿಮಾನದ ಪೈಲಟ್ ಮತ್ತು ಏರ್ ಇಂಡಿಯಾದ ಭದ್ರತೆಗೆ ಮಾಹಿತಿ ನೀಡಿದರು. ದೆಹಲಿಗೆ ಬಂದಿಳಿದ ಕೂಡಲೇ ಪ್ರಯಾಣಿಕ ರಾಮ್ ಸಿಂಗ್ ಅವರನ್ನು ಐಜಿಐ ಏರ್‌ಪೋರ್ಟ್ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ವಿಮಾನ ಲ್ಯಾಂಡ್ ಆದ ಕೂಡಲೇ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದೆ. ಘಟನೆಯ ಬಗ್ಗೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.