ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ 2024ರಲ್ಲಿ ಉದ್ಘಾಟನೆಗೊಂಡು ಭಕ್ತರು ಶ್ರೀರಾಮನ ದರುಶನ ಪಡೆಯುತ್ತಿದ್ದಾರೆ.
ರಾಮ ಮಂದಿರ ದೇಗುಲವನ್ನು ದೇಶ ವಿದೇಶದ ರಾಮ ಭಕ್ತರು ನೀಡಿದ ದೇಣಿಗೆಯಲ್ಲಿ ನಿರ್ಮಾಣವಾಗಿದೆ. ಆದ್ರೆ ಉದ್ಘಾಟನೆ ವೇಳೆ ರಾಮ ಮಂದಿರದ ಕಾಮಗಾರಿ ಸಂಪೂರ್ಣವಾಗಿರಲಿಲ್ಲ. ಇದೀಗ ಸರಿಸುಮಾರು ಒಂದು ವರ್ಷದ ಬಳಿಕ ರಾಮಮಂದಿರದ ಕಾಮಗಾರಿ ಸಂಪೂರ್ಣಗೊಂಡಿದೆ.
ಇದರ ಬೆನ್ನಲ್ಲೇ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯೋಧ್ಯೆ ರಾಮ ಮಂದಿರದ ವಿಡಿಯೋ ಬಿಡುಗಡೆ ಮಾಡಿದೆ. ಭವ್ಯ ರಾಮ ಮಂದಿರ ಅತ್ಯಂತ ಆಕರ್ಷಕ ಮಾತ್ರವಲ್ಲ, ಶ್ರೀರಾಮನ ಸಾನಿಧ್ಯ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಬಿಡುಗಡೆ ಮಾಡಿದ ವಿಡಿಯೋದಲ್ಲಿ ರಾಮ ಮಂದಿರದ ಗರ್ಭಗುಡಿ ಗೋಪುರ ಮೇಲೆ ಚಿನ್ನ ಲೇಪಿತ ಕಳಶ ಇಡಲಾಗಿದೆ. ಇನ್ನು ರಾಮಮಂದಿರ ಆವರಣ, ಕಾಂಪ್ಲೆಕ್ಸ್ ಕಲಸಗಳು ಪೂರ್ಣಗೊಂಡಿದೆ. ಭವ್ಯ ರಾಮ ಮಂದಿರಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
https://x.com/ShriRamTeerth/status/1992156331156082875
ಆಯೋಧ್ಯೆ ರಾಮಮಂದಿರ ಕಾಮಗಾರಿ ಸಂಪೂರ್ಣಗೊಂಡಿರುವ ಹಿನ್ನಲೆಯಲ್ಲಿ ನವೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ. ಇದೇ ವೇಳೆ ರಾಮ ಮಂದಿರ ಮುಂಭಾಗದಲ್ಲಿ ಸ್ಥಾಪಿಸಿರುವ ಬರೋಬ್ಬರಿ 191 ಅಡಿ ಎತ್ತರದ ಸ್ಥಂಭದಲ್ಲಿ ಮೋದಿ ಧ್ವಜಾರೋಹಣ ಮಾಡಲಿದ್ದಾರೆ. ಈಗಾಗಲೇ ಅರ್ಚಕರು, ಹಿರಿಯ ಸ್ವಾಮೀಜಿಗಳು ಸೇರಿದಂತೆ ಟ್ರಸ್ಟ್ ಸದಸ್ಯರು ರಾಮ ಮಂದಿರದ ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇತ್ತ ಎಂಜಿನೀಯರ್ ಸೇರಿದಂತೆ ಹಲವು ಸಿಬ್ಬಂದಿಗಳು ಮೋದಿ ಧ್ವಜಾರೋಹಣ ಕಾರ್ಯಕ್ರಮದ ಸಿದ್ಧತೆ ಮಾಡಿದ್ದಾರೆ.
2020ರಲ್ಲಿ 60 ಲಕ್ಷ ಈಗ 6 ತಿಂಗಳಲ್ಲಿ 23 ಕೋಟಿ ಮಂದಿ ಬೇಟಿ
ಆಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಳಿಕ ಆಯೋಧ್ಯೆ ಚಿತ್ರಣ ಬದಲಾಗಿದೆ. ರಾಮಾಯಣ ಕಾಲದಲ್ಲಿ ಆಯೋಧ್ಯೆ ಸುಭೀಕ್ಷವಾಗಿತ್ತು. ದಶರತ ಮಹರಾಜ, ಶ್ರೀರಾಮನ ಆಳ್ವಿಕೆಯಲ್ಲಿ ಪ್ರಜೆಗಳು ಸಂತೋಷವಾಗಿದ್ದರು. ಪ್ರತಿ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆಯೋಧ್ಯೆ ಜನರಿಂದ ತುಂಬಿ ತುಳುಕುತಿತ್ತು. ಬಳಿಕ ನಡೆದ ದಾಳಿ, ದೇವಸ್ಥಾನ ಧ್ವಂಸಗೊಂಡ ಕಾರಣ ಆಯೋಧ್ಯೆಯ ಪರಂಪರೆ ನಶಿಸಿಹೋಗಿತ್ತು. ಆಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭದ ಬಳಿಕ ಆಯೋಧ್ಯೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. 2020ರಲ್ಲಿ 60 ಲಕ್ಷ ಮಂದಿ ಆಯೋಧ್ಯೆಗೆ ಬೇಟಿ ನೀಡಿದ್ದರು. 2025ರ ಜನವರಿಯಿಂದ ಜೂನ್ ತಿಂಗಳ ವರೆಗೆ ಬರೋಬ್ಬರಿ 23 ಕೋಟಿ ಭಕ್ತರು, ಪ್ರವಾಸಿಗರು ಭೇಟಿ ನೀಡಿದ್ದಾರೆ. ಡಿಸೆಂಬರ್ ಅಂತ್ಯದ ವೇಳೆಗೆ 50 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆಯೋಧ್ಯೆಯಲ್ಲಿ ಇದೀಗ ಗತಕಾಲದ ವೈಭವ ಮರುಕಳಿಸಿದೆ. ಈ ಬಾರಿಯ ಆಯೋಧ್ಯೆ ದೀಪಾವಳಿಯಲ್ಲಿ 26 ಲಕ್ಷಕ್ಕೂ ಅದಿಕ ದೀಪಗಳ ಬೆಳಗಿ ದಾಖಲೆ ಬರೆಯಲಾಗಿತ್ತು.

