ಹೊಸದಿಗಂತ ವರದಿ ಕಾರವಾರ:
ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸಿನ ಪಾಟಾ ಬ್ಲೇಡ್ ತುಂಡಾಗಿ ಬಸ್ ಪಲ್ಟಿಯಾಗುವ ಹಂತಕ್ಕೆ ತಲುಪಿದರೂ ಚಾಲಕನ ಸಮಯ ಪ್ರಜ್ಞೆ ಮತ್ತು ಸಾರ್ವಜನಿಕರ ಸ್ಪಂದನೆಯಿಂದ ಸುಮಾರು 50 ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ನಗರದ ಹಬ್ಬುವಾಡದಲ್ಲಿ ಸಂಭವಿಸಿದೆ.
ಕೆರವಡಿ ಮಾರ್ಗವಾಗಿ ಮಲ್ಲಾಪುರಕ್ಕೆ ಸಾಗಿಸುತ್ತಿದ್ದ ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು, ಶಾಲಾ ಶಿಕ್ಷಕಿಯರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಹಬ್ಬುವಾಡ ಬಳಿ ಬಸ್ಸಿನ ಪಾಟಾ ಬ್ಲೇಡ್ ತುಂಡಾಗಿ ಬಸ್ಸು ಪಲ್ಟಿಯಾಗುವ ಹಂತದಲ್ಲಿದ್ದಾಗ ಚಾಲಕ ಬಸ್ಸನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಸ್ಥಳೀಯರು ಓಡಿ ಬಂದು ಒಂದು ಬದಿ ವಾಲುತ್ತಿರುವ ಬಸ್ಸನ್ನು ಹಿಡಿದು ಆಧಾರ ನೀಡಿ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.
ಬಸ್ಸಿನ ಹಿಂಬದಿ ಚಕ್ರ ಬೇರ್ಪಟ್ಟಿದ್ದು ಬಸ್ಸಿನಲ್ಲಿ ಇದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾದರೂ ಭಾರೀ ಅನಾಹುತ ಸಂಭವಿಸುವುದು ತಪ್ಪಿದಂತಾಗಿದೆ. ಕಾರವಾರ ಗ್ರಾಮೀಣ ಭಾಗಗಳಿಗೆ ಗುಜರಿ ಬಸ್ಸುಗಳನ್ನು ಓಡಿಸಲಾಗುತ್ತಿದ್ದು ಈ ಹಲವು ಬಾರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಗಮನ ಸೆಳೆಯುವ ಪ್ರಯತ್ನ ನಡೆಸಲಾಗಿದೆಯಾದರೂ ಗುಜರಿ ಬಸ್ಸುಗಳ ಓಡಾಟ ಮುಂದುವರಿದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಬ್ಬುವಾಡದಲ್ಲಿ ಬಸ್ ರಸ್ತೆಗೆ ಅಡ್ಡವಾಗಿ ನಿಂತ ಪರಿಣಾಮ ಕೆಲವು ಗಂಟೆಗಳ ಕಾಲ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಯಿತಲ್ಲದೇ ಸ್ಥಳದಲ್ಲಿ ಭಾರೀ ಪ್ರಮಾಣದಲ್ಲಿ ಜನದಟ್ಟಣೆಗೆ ಕಾರಣವಾಯಿತು.