ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮಮಂದಿರ (Ram Mandir) ಲೋಕಾರ್ಪಣೆಗೆ ಸಜ್ಜಾಗುತ್ತಿದ್ದಾರೆ ಅನೇಕರು ಅಪಸ್ವರ ಎತ್ತಲು ಶುರುಮಾಡಿದ್ದು, ಇದೀಗ ಬಿಹಾರದ ಶಿಕ್ಷಣ ಸಚಿವ ಡಾ.ಚಂದ್ರಶೇಖರ್ (Chandra Shekhar) ವಿವಾದದ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಅಯೋಧ್ಯೆ ರಾಮಮಂದಿರ ಕುರಿತು ಮಾತನಾಡುತ್ತಾ, ದೇವಸ್ಥಾನಕ್ಕೆ ಹೋಗುವ ಹಾದಿ ಮಾನಸಿಕ ಗುಲಾಮಗಿರಿಯ ಹಾದಿಯಾಗಿದೆ. ಶಾಲೆಗಳಿಗೆ ಹೋಗುವ ಹಾದಿ ಮಾತ್ರವೇ ಬೆಳಕಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳುತ್ತಾ..ಇದನ್ನು ನಾನು ಹೇಳಿಲ್ಲ, ಸಾವಿತ್ರಿ ಬಾಯಿ ಫುಲೆ ಅವರು ಹೇಳಿದ್ದು ಎಂದಿದ್ದಾರೆ.
ದೇವಸ್ಥಾನಕ್ಕೆ ಹೋಗುವ ಹಾದಿ ಯಾವತ್ತಿದ್ದರೂ ಮಾನಸಿಕ ಗುಲಾಮಗಿರಿಯ ಹಾದಿ, ಸಾವಿತ್ರಿ ಬಾಯಿ ಫುಲೆಯವರು ದೇಶದಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಶಿಕ್ಷಣದ ಜ್ಯೋತಿಯನ್ನು ಜಾಗೃತಗೊಳಿಸಿದರು. 19ನೇ ಶತಮಾನದಲ್ಲಿ ಅಸ್ಪೃಶ್ಯತೆ, ಸತಿ ಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಸಾವಿತ್ರಿ ಬಾಯಿ ತಮ್ಮ ಪತಿಯೊಂದಿಗೆ ಒಟ್ಟಾಗಿ ಹೋರಾಡಿದ್ದಾರೆ. ಅವರಿಂದಲೇ ನಮ್ಮ ಸಮಾಜದಲ್ಲಿ ಪರಿಶಿಷ್ಟ ಜಾತಿಗೆ ಸ್ಥಾನ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಯಾವುದೇ ದೇವಸ್ಥಾನಗಳು ನಿಮ್ಮ ಮಕ್ಕಳನ್ನು ಜವಾನನಿಂದ ಕಲೆಕ್ಟರ್ ಆಗಿ ಪರಿವರ್ತಿಸುವುದಿಲ್ಲ, ಪುಸ್ತಕ, ಲೇಖನಿ, ಶಾಲೆ, ಶಿಕ್ಷಣದಿಂದ ಮಾತ್ರವೇ ನಿಮ್ಮ ಮಕ್ಕಳನ್ನ ಪರಿವರ್ತಿಸಲು ಸಾಧ್ಯ. ಆದ್ದರಿಂದ ಅಕ್ಷತೆಯನ್ನು ನೀಡುವವರನ್ನು ಬಿಟ್ಟು ಅಂಬೇಡ್ಕರ್ ಅವರ ತತ್ವಗಳನ್ನು ಅನುಸರಿಸಿ ಎಂದು ಕರೆ ನೀಡಿದ್ದಾರೆ.