ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ರೋಗಿ ಅಥವಾ ಆತನ ಕುಟುಂಬಸ್ಥರು ಒಪ್ಪಿಗೆ ನೀಡಿದರೆ ಮಾತ್ರ ಆತನಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದಾಗಿದೆ. ಬಲವಂತದಿಂದ ಐಸಿಯುಗೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಆಸ್ಪತ್ರೆಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ಆಸ್ಪತ್ರೆಗಳಲ್ಲಿ ರೋಗಿಗಳನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸುವ ಕುರಿತು ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವಾಲಯ ನಿರ್ದೇಶನ ನೀಡಿದೆ.
ಈ ಮಾರ್ಗಸೂಚಿಗಳನ್ನು 24 ಮಂದಿ ತಜ್ಞರು ಚರ್ಚಿಸಿ ಅಂತಿಮಗೊಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳು, ವಿಪತ್ತು ಸಂದರ್ಭಗಳಲ್ಲಿ ರೋಗಿಯನ್ನು ಐಸಿಯುಗೆ ದಾಖಲಿಸಬಹುದು. ರೋಗಿಯ ಅಂಗಾಂಗ ವೈಫಲ್ಯ, ಅಂಗಾಂಗ ಕಸಿ ಅಥವಾ ಹದಗೆಡುತ್ತಿರುವ ವೈದ್ಯಕೀಯ ಸ್ಥಿತಿಯನ್ನು ಅವಲೋಕಿಸಿ ಐಸಿಯುಗೆ ಪ್ರವೇಶ ನೀಡಬೇಕು. ಅಲ್ಲದೆ ರೋಗಿಯ ಪ್ರಜ್ಞಾಹೀನತೆ, ಹೆಮೊಡೈನಮಿಕ್ ಅಸ್ಥಿರತೆ, ಉಸಿರಾಟದ ಸಮಸ್ಯೆ ಹೀಗೆ ತೀವ್ರವಾಗಿ ಅನಾರೋಗ್ಯ ಪೀಡಿತರಾಗಿದ್ದರೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಐಸಿಯುಗೆ ದಾಖಲಿಸುವ ಮುನ್ನ ರೋಗಿಯ ರಕ್ತದೊತ್ತಡ, ನಾಡಿ ಬಡಿತ, ಹೃದಯ ಬಡಿತ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ, ನರದ ಸ್ಥಿತಿಗತಿ ಮೊದಲಾದವುಗಳ ಪರಿಶೀಲನೆ ನಡೆಸಬೇಕು. ಅದಾದ ಬಳಿಕವೇ ರೋಗಿಯನ್ನು ದಾಖಲಿಸಿಕೊಳ್ಳಬೇಕು ಎಂದು ಮಾರ್ಗಸೂಚಿ ಹೇಳಿದೆ.