ಹೊಸದಿಗಂತ ಚಿತ್ರದುರ್ಗ:
“ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರಶಿಕ್ಷಣ ವರ್ಗಗಳು ಅನಿವಾರ್ಯ. ಇಲ್ಲಿನ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡರೆ ಪಕ್ಷವು ಶಕ್ತಿಯುತವಾಗುವುದಲ್ಲದೆ, ನೀವು ಪ್ರಭಾವಿ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ,” ಎಂದು ಶಾಸಕ ಡಾ. ಎಂ. ಚಂದ್ರಪ್ಪ ಹೇಳಿದರು.
ಚಿತ್ರದುರ್ಗ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನ-2026’ರ ಜಿಲ್ಲಾ ಮಟ್ಟದ ಯೋಜನಾ ಸಭೆಯಲ್ಲಿ ಅವರು ಮಾತನಾಡಿದರು.
ಈ ಅಭಿಯಾನವು ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಕಾರ್ಯಕರ್ತರ ಕಾರ್ಯಪದ್ಧತಿ ಮತ್ತು ಸಂಘಟನಾ ಶಕ್ತಿಯನ್ನು ಹೆಚ್ಚಿಸುವ ವೇದಿಕೆಯಾಗಿದೆ.
“ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಂತೆ ಒಂದೇ ಕುಟುಂಬದವರು ಅಧ್ಯಕ್ಷರಾಗುವ ಸಂಪ್ರದಾಯವಿಲ್ಲ. ಸಾಮಾನ್ಯ ಕಾರ್ಯಕರ್ತನೂ ಉನ್ನತ ಹುದ್ದೆಗೇರಲು ಇಲ್ಲಿ ಅವಕಾಶವಿದೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಸಾಕ್ಷಿ,” ಎಂದು ಚಂದ್ರಪ್ಪ ತಿಳಿಸಿದರು.
ಅಧಿಕಾರಕ್ಕಾಗಿ ಹಪಹಪಿಸದೆ ಪಕ್ಷದ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ಗುರುತಿಸಿ ಜವಾಬ್ದಾರಿ ನೀಡುವುದು ಬಿಜೆಪಿಯ ಸಂಸ್ಕೃತಿ ಎಂದು ಅವರು ಕಿವಿಮಾತು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್ ಮಾತನಾಡಿ, ಈ ಅಭಿಯಾನವು ಕಾರ್ಯಕರ್ತರ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ. ತರಬೇತಿಯಲ್ಲಿ ಚರ್ಚಿಸಲಾಗುವ ೭ ಪ್ರಮುಖ ವಿಷಯಗಳನ್ನು ಬೂತ್ ಮಟ್ಟದ ಮತದಾರರಿಗೆ ತಲುಪಿಸುವಂತೆ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಅವರು ಮಾತನಾಡಿ, “ಪಕ್ಷದ ಸಿದ್ಧಾಂತಗಳಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ೧೮ ಪ್ರಶಿಕ್ಷಣ ವರ್ಗಗಳನ್ನು ಆಯೋಜಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು,” ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಬಾಳೆಕಾಯಿ ರಾಮದಾಸ್, ಮಾಧುರಿ ಗಿರೀಶ್, ಮಂಜುನಾಥ್, ರೇಖಾ, ಪಂಪ ಹಾಗೂ ಶೈಲೇಶ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



