ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆಯ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಜಿಲ್ಲೆಯ ಹುಲಿ ಸುರಕ್ಷಿತ ಅರಣ್ಯ ಹಾಗೂ ವನ್ಯಜೀವಿಧಾಮಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಿರುವುದಲ್ಲದೆ ಕಾಡಿನೊಳಗೆ ಜಾನುವಾರುಗಳನ್ನು ಬಿಡುವುದಕ್ಕೆ ತಡೆ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲೇ ಎರಡು ಹುಲಿ ಸುರಕ್ಷಿತ ಅರಣ್ಯ ಹಾಗೂ ಎರಡು ವನ್ಯಜೀವಿಧಾಮಗಳನ್ನು ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆ ಚಾಮರಾಜನಗರಕ್ಕಿದೆ. ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿ ಹುಲಿಗಳ ನಾಡು ಎಂಬ ಖ್ಯಾತಿಗೂ ಚಾಮರಾಜನಗರ ಭಾಜನವಾಗಿದೆ. ಇತ್ತೀಚಿಗೆ ಆಶಾದಾಯಕವಾಗಿ ಹುಲಿಗಳ ಸಂಖ್ಯೆ ವೃದ್ಧಿಸುತ್ತಿದ್ದ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳಿಗೆ ವಿಷಪ್ರಾಶಾನ ಮಾಡಿ ಕೊಂದು ಹಾಕಿರುವುದು ಹುಲಿಗಳ ಸಂತತಿ ವೃದ್ಧಿಗೆ ಭಾರೀ ಪೆಟ್ಟು ಬಿದ್ದಿದೆ.
ಈ ಕರಾಳ ಘಟನೆಯ ನಂತರ ಎಚ್ಚೆತ್ತಿರುವ ಅರಣ್ಯ ಇಲಾಖೆ ಜಿಲ್ಲೆಯ ಬಂಡೀಪುರ ಹಾಗು ಬಿಳಿಗಿರಿರಂಗನ ಹುಲಿ ಸಂರಕ್ಷಿತ ಪ್ರದೇಶ, ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿಧಾಮಗಳಲ್ಲಿ ಭಾರೀ ಕಟ್ಟೆಚ್ಚರ ವಹಿಸಿದೆ. ಈ ಅರಣ್ಯಗಳಲ್ಲಿ ಗಸ್ತು ತೀವ್ರಗೊಳಿಸಲಾಗಿದೆ. ಕಾಡಂಚಿನ ಗ್ರಾಮಸ್ಥರು ಜಾನುವಾರುಗಳನ್ನು ಅರಣ್ಯದೊಳಗೆ ಮೇಯಲು ಬಿಡದಂತೆ ಜಾಗೃತಿ ಮೂಡಿಸಲಾಗುತ್ತಿದೆ. ತಮಿಳುನಾಡು ಗಡಿ ಭಾಗದ ಹಳ್ಳಿಗಳಿಂದ ಬರುವ ಜಾನುವಾರುಗಳಿಗೂ ಕಡಿವಾಣ ಹಾಕಲಾಗಿದೆ.