ಹೊಸದಿಗಂತ ವರದಿ, ಕುಶಾಲನಗರ:
ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ(ಪಿಡಿಒ) ವರ್ಗವಾಗಿ ಎರಡು ತಿಂಗಳು ಕಳೆದರೂ ನೂತನ ಅಭಿವೃದ್ಧಿ ಅಧಿಕಾರಿಗಳ ನೇಮಕವಾಗದೆ ಗ್ರಾಮದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ.
ಹೆಬ್ಬಾಲೆ ಗ್ರಾಮ ಪಂಚಾಯತಿಯು 6 ಉಪ ಗ್ರಾಮಗಳನ್ನು ಹೊಂದಿದೆ. ಹೆಚ್ಚು ಜನಸಂಖ್ಯೆ ಹಾಗೂ 14 ಗ್ರಾಮ ಪಂಚಾಯತಿ ಸದಸ್ಯರನ್ನು ಹೊಂದಿರುವ ಈ ಗ್ರಾಮ ಪಂಚಾಯತಿಗೆ ಅಭಿವೃದ್ಧಿ ಅಧಿಕಾರಿಗಳ ಜೊತೆಗೆ ಕಾರ್ಯದರ್ಶಿಯ ನೇಮಕವೂ ಇದುವರೆಗೆ ನಡೆದಿಲ್ಲ.
ಈಗಾಗಲೇ ಬೇಸಿಗೆ ಕಾಲ ಸಮೀಪಿಸುತ್ತಿದ್ದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಬಗೆಹರಿಸಲು ಗ್ರಾಮ ಪಂಚಾಯತಿ ವತಿಯಿಂದ ಸಾಧ್ಯವಾಗುತ್ತಿಲ್ಲ. ಗ್ರಾಮ ವ್ಯಾಪ್ತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಕೋರಲು ಪಂಚಾಯತಿಗೆ ಬಂದರೆ ಅಭಿವೃದ್ಧಿ ಅಧಿಕಾರಿ ಇಲ್ಲದೆ ಕೆಳವರ್ಗದ ನೌಕರರಿಗೆ ತಿಳಿಸಬೇಕಾದ ಸ್ಥಿತಿ ಇದೆ. ಆದರೆ ಇದರಿಂದ ಯಾವುದೇ ಪ್ರಯೋಜನ ಅಗುತ್ತಿಲ್ಲ ಎಂದು ಹೆಬ್ಬಾಲೆ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ತಾಲೂಕು ಪಂಚಾಯತಿ ವತಿಯಿಂದ ನೇಮಕ ಮಾಡಲಾದ ಮಹಿಳಾ ಅಭಿವೃದ್ಧಿ ಅಧಿಕಾರಿ ಈಗಾಗಲೇ ವರ್ಗಗೊಂಡು ಹೋಗಿರುವುದರಿಂದ ಗ್ರಾಮ ವ್ಯಾಪ್ತಿಯಲ್ಲಿ ಯಾವುದೇ ಕೆಲಸ ಕಾರ್ಯಗಳಾಗುತ್ತಿಲ್ಲ.
ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೂ ಪ್ರಗತಿಯಾಗುತ್ತಿಲ್ಲ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು ಅರ್ಧದಲ್ಲೇ ಸ್ಥಗಿತಗೊಂಡಿವೆ.
ಕಳೆದ ಎರಡು ತಿಂಗಳುಗಳಿಂದ ಅಭಿವೃದ್ಧಿ ಅಧಿಕಾರಿಗಳ ನೇಮಕವಾಗದೇ ಇರುವುದರಿಂದ ತಿಂಗಳ ಸಾಮಾನ್ಯ ಸಭೆಗಳೂ ನಡೆದಿಲ್ಲ. ಕಸ ವಿಲೇವಾರಿ ಘಟಕ ಮತ್ತು ಬಹು ಮುಖ್ಯವಾದ ನಿವೇಶನ ರಹಿತರಿಗೆ ನಿವೇಶನ ಹಂಚುವ ಪ್ರಕ್ರಿಯೆ ಕೂಡಾ ಸ್ಥಗಿತಗೊಂಡಿದೆ. ಇದರಿಂದಾಗಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರನ್ನು ಕೂಡಲೇ ನೇಮಕ ಮಾಡುವಂತೆ ಈ ಭಾಗದ ನೂರಾರು ಸಾರ್ವಜನಿಕರು, ಗ್ರಾಮಸ್ಥರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಣಾಧಿಕಾರಿಯವರನ್ನು ಮತ್ತು ತಾಲೂಕು ಕಾರ್ಯನಿರ್ವಾಹಣಾಧಿಕಾರಿಯವರನ್ನು ಒತ್ತಾಯಿಸಿದ್ದಾರೆ.
ಒಂದು ವಾರದ ಗಡುವು: ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಯಿಲ್ಲದೆ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯದೇ ಇರುವುದರಿಂದ ಒಂದು ವಾರದ ಒಳಗೆ ಖಾಯಂ ಅಭಿವೃದ್ಧಿ ಅಧಿಕಾರಿಗಳ ನೇಮಕ ಮಾಡಬೇಕು. ಇಲ್ಲವಾದಲ್ಲಿ ಗ್ರಾಮ ಪಂಚಾಯತಿ, ಮತ್ತು ತಾಲೂಕು ಪಂಚಾಯತ್ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಷರಿಕೆ ನೀಡಿದ್ದಾರೆ.