ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯ ಹಿರೇಕೆರೂರ ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿ ಹಾಗೂ ಪ್ರಭಾರಿ ಪಿಡಿಒ ಕೆ.ಪಿ. ಮಾನೆ ಅವರನ್ನು ಸರ್ಕಾರಿ ಕರ್ತವ್ಯದಲ್ಲಿ ಲೋಪವೆಸಗಿದ ಮತ್ತು ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಆದೇಶಿಸಿದ್ದಾರೆ.
ಕೆ.ಪಿ. ಮಾನೆ ಚನ್ನಳ್ಳಿ ಗ್ರಾಮ ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಅದರ ಪ್ರಭಾರಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಬೆಳೆ ಹಾನಿ ಸ್ಥಳ ಸಮೀಕ್ಷೆ ಜವಾಬ್ದಾರಿ ಹಂಚಿಕೆ ವೇಳೆ ಸಮರ್ಪಕವಾಗಿ ಬೆಳೆ ಹಾನಿ ಆದುದರ ಕುರಿತು ಆನ್‌ಲೈನ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡದೇ ರೈತರಿಗೆ ನಷ್ಟ ಉಂಟು ಮಾಡಿದ್ದಲ್ಲದೇ, ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ರೈತರು ದೂರು ದಾಖಲಿಸಿದ್ದರು. ಬಳಿಕ ಈ ಕುರಿತು ತಾಪಂ ಇಓಗಳು ಸ್ಥಳ ಪರಿಶೀಲನೆ ನಡೆಸಿ ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ಅಪ್‌ಲೋಡ್ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಈ ಕರ್ತವ್ಯ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಹಿರೇಕೆರೂರ ತಾಲೂಕಿನ ಚನ್ನಳ್ಳಿ ಗ್ರಾಮ ಪಂಚಾಯಿತಿಯ ಗ್ರೇಡ್-1 ಕಾರ್ಯದರ್ಶಿ ಹಾಗೂ ಪ್ರಭಾರಿ ಪಿಡಿಒ ಕೆ.ಪಿ. ಮಾನೆ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.