ವಿಶ್ವಕ್ಕೆ ಹಿಂದುತ್ವದಿಂದ ಶಾಂತಿ: ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೌತಿಕವಾದ, ಕಮ್ಯೂನಿಸಂ ಮತ್ತು ಬಂಡವಾಳಶಾಹಿ ಪ್ರಯೋಗಗಳಿಂದ ನಲುಗಿಬಿಟ್ಟಿರುವ ಜಗತ್ತಿಗೆ ಭಾರತವು ನೈಜ ನೆಮ್ಮದಿ, ಶಾಂತಿ, ಸಂತೃಪ್ತಿಯ ಹಾದಿಯನ್ನು ತೋರಬಲ್ಲುದು. ಕೊರೋನಾ ನಂತರದಲ್ಲಿ ಇಂತಹ ಅಪೂರ್ವ ಚಿಂತನೆಯೊಂದು ಇಡೀ ಜಗತ್ತಿನಲ್ಲಿ ಮೂಡಿದೆ. ಹಾಗಾಗಿ ಜಗತ್ತಿನ ಎಲ್ಲೇ ಇದ್ದರೂ ಪರಸ್ಪರ ಸಂಪರ್ಕ, ಸೌಹಾರ್ದ ಕಾಯ್ದುಕೊಳ್ಳುವ ಜತೆಗೆ ಸಂಘಟಿತ ನೆಲೆಯಲ್ಲಿ ಜಗತ್ತಿನೊಂದಿಗೆ ಸಮನ್ವಯತೆ ಸಾಧಿಸುವಂತೆ ಹಿಂದುಗಳಿಗೆ ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗ್ವತ್ ಕರೆ ನೀಡಿದ್ದಾರೆ.

ಥೈಲ್ಯಾಂಡ್‌ನ ರಾಜಧಾನಿಯಲ್ಲಿ ನಡೆದ ಜಾಗತಿಕ ತೃತೀಯ ಹಿಂದು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೋರ್ವ ಹಿಂದುವನ್ನು ನಾವು ತಲುಪಬೇಕಿದೆ. ಸಂಘಟಿತ ಹಿಂದುಗಳು ಜಗತ್ತಿನ ಎಲ್ಲಾ ಜನರ ಜತೆ ಸಮನ್ವಯತೆ ಸಾಧಿಸಬಲ್ಲರು. ಹಿಂದುಗಳಿಂದು ಹೆಚ್ಚಿನ ಸಂಖ್ಯೆಯಲ್ಲಿ ಸಮನ್ವಯಗೊಂಡಿರುವ ಹಿನ್ನೆಲೆಯಲ್ಲಿ, ಜಗತ್ತಿನ ಜತೆ ಸಮನ್ವಯತೆ ಸಾಧಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದವರು ಜಗತ್ತಿನಾದ್ಯಂತದ ಚಿಂತಕರು, ನಾಯಕರು, ಸಾಮಾಜಿಕ ಕಾರ್ಯಕರ್ತರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ನುಡಿದರು.

ಕೊರೋನಾ ನಂತರ ಹೊಸ ಪರಿವರ್ತನೆ: ನಿಜವಾದ ನೆಮ್ಮದಿ ಮತ್ತು ಸಂತೃಪ್ತಿಯ ಬದುಕಿಗೆ ಭಾರತ ನಿಶ್ಚಯವಾಗಿ ಹಾದಿ ತೋರಬಲ್ಲುದು ಎಂಬ ಸತ್ಯವನ್ನು ಇಡೀ ಜಗತ್ತು ಗುರುತಿಸಿದೆ. ಮುಖ್ಯವಾಗಿ ಕೊರೋನಾ ನಂತರದ ಸನ್ನಿವೇಶದಲ್ಲಿ ಜಗತ್ತಿನಾದ್ಯಂತ ಈ ರೀತಿ ಅದ್ಭುತ ಪರಿವರ್ತನಾತ್ಮಕ ಒಕ್ಕೊರಳ ಚಿಂತನೆ ಮೂಡಿದೆ ಎಂದರು.

2 ಸಾವಿರ ವರ್ಷ ಕಾಲ ನಾನಾ ಪ್ರಯೋಗ: ಪ್ರಸಕ್ತ ಇಡೀ ಜಗತ್ತು ತತ್ತರಿಸುವ ಸ್ಥಿತಿಯಲ್ಲಿದೆ. ಸಂತೋಷ ,ಶಾಂತಿಗಾಗಿ ಜಗತ್ತು ಬರೋಬ್ಬರಿ 2 ಸಾವಿರ ವರ್ಷಗಳ ಕಾಲ ನಾನಾ ಪ್ರಯೋಗ ನಡೆಸಿತ್ತು. ಐಹಿಕವಾದ, ಕಮ್ಯೂನಿಸ್ಟ್‌ವಾದ ಮತ್ತು ಬಂಡವಾಳಶಾಹಿವಾದಗಳ ಮೊರೆ ಹೋಗಿತ್ತು. ವಿವಿಧ ಮತಗಳನ್ನೂ ಅನುಸರಿಸಿತ್ತು. ಪರಿಣಾಮ ಅವರಿಗೆ ಐಹಿಕ ಸಂಪತ್ತು ದೊರೆಯಿತು. ಆದರೆ ನೈಜ ಮನ:ಶಾಂತಿಯಾಗಲಿ, ಸಂತೃಪ್ತಿಯಾಗಲಿ ಲಭಿಸಿಲ್ಲ . ನೈಜ ನೆಮ್ಮದಿ-ಸಂತೃಪ್ತಿಯ ಹಾದಿಯನ್ನು ಭಾರತ ಖಂಡಿತ ತೋರಬಲ್ಲುದು ಎಂಬ ಸತ್ಯವೀಗ ಮುಖ್ಯವಾಗಿ ಕೊರೋನಾ ನಂತರದಲ್ಲಿ ಇಡೀ ಜಗತ್ತಿಗೆ ಮನವರಿಕೆಯಾಗಿದೆ.

ವಸುಧೈವ ಕುಟುಂಬಕಮ್ ಸ್ಫೂರ್ತಿ ಪಸರಿಸಿ: ಇಡೀ ಜಗತ್ತು ಒಂದು ಕುಟುಂಬವಿದ್ದಂತೆ. ವಸುಧೈವ ಕುಟುಂಬಕಮ್ ಸ್ಫೂರ್ತಿಯನ್ನು ವಿಶ್ವಾದ್ಯಂತ ಪ್ರಸರಿಸುವಲ್ಲಿ ಹಿಂದುಗಳು ನಿರ್ಣಾಯಕ ಪಾತ್ರ ವಹಿಸಬೇಕು. ಇದಾಗಲು ನಾವೆಲ್ಲರು ಒಗ್ಗಟ್ಟಾಗಬೇಕು ಮತ್ತು ಏಕತೆಯೊಂದಿಗೆ ಕಾರ್ಯಪ್ರವೃತ್ತರಾಗಬೇಕು. ಪ್ರತಿಯೋರ್ವರೂ ಇದಕ್ಕೆ ಸಿದ್ಧರಾಗಿ ಮುಂದೆ ಬರುವರು ಎಂದು ಹೇಳಲಾಗದು, ಆದರೆ ಪ್ರತಿಯೋರ್ವರ ಮನವೊಲಿಸಿ ಒಗ್ಗೂಡಿಸುವುದು ನಮ್ಮ ಜಾಣ್ಮೆ ಎಂದು ಭಾಗ್ವತ್ ಹೇಳಿದರು

ಜಾಗತಿಕ ಹಿಂದು ಪ್ರತಿಷ್ಠಾನದ ಸ್ಥಾಪಕ ಮತ್ತು ಜಾಗತಿಕ ಅಧ್ಯಕ್ಷ ಸ್ವಾಮಿ ವಿಗ್ಯಾನಾನಂದ ಸ್ವಾಮೀಜಿ ಶಂಖನಾದ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಆಧ್ಯಾತ್ಮಿಕ ನಾಯಕರಾದ ಮಾತಾ ಅಮೃತಾನಂದಮಯಿ ದೇವಿ, ವಿಹಿಂಪ ಪ್ರ.ಕಾರ್ಯದರ್ಶಿ ಮಿಲಿಂದ್ ಪರಾಂದೆ, ಡಬ್ಲ್ಯೂಎಚ್‌ಸಿ ಸಂಘಟನಾ ಸಮಿತಿ ಅಧ್ಯಕ್ಷರಾದ ಸುಶೀಲ್ ಸರಾಫ್, ಭಾರತ ಸೇವಾಶ್ರಮ ಸಂಘದ ಕಾರ್ಯಾಧ್ಯಕ್ಷ ಸ್ವಾಮಿ ಪೂರ್ಣಾತ್ಮಾನಂದ, ಹಿಂದುಯಿಸಂ ಟುಡೇ-ಯುಎಸ್‌ಎ ಪ್ರಕಾಶಕ ಸದ್ಗುರು ಬೋಧಿನಾಥ ವೇಲನ್‌ಸ್ವಾಮಿ ಉಪಸ್ಥಿತರಿದ್ದರು.

ಸುಮಾರು 60 ರಾಷ್ಟ್ರಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದು, ಜಗತ್ತಿನಾದ್ಯಂತ ಹಿಂದುಗಳು ಎದುರಿಸುತ್ತಿರುವ ಸವಾಲುಗಳು-ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಾವೇಶವೊಂದು ಸೂಕ್ತ ವೇದಿಕೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!