ಬೆಂಗಳೂರಿನಲ್ಲಿ ಶಾಂತಿಯುತ ಕರ್ನಾಟಕ ಬಂದ್: ಸಹಜ ಸ್ಥಿತಿಯತ್ತ ರಾಜಧಾನಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಬೆಂಗಳೂರಿನಲ್ಲಿ ಶಾಂತಿಯುತವಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದರು.

ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಕೆಲವು ಸಂಘಟನೆ, ರಾಜಕೀಯ ಪಕ್ಷಗಳು ಇವತ್ತಿನ ಬಂದ್​ಗೆ ಕರೆ ಕೊಟ್ಟಿದ್ದವು. ಬೆಂಗಳೂರಿನಲ್ಲಿ ಶಾಂತಿಯುತವಾಗಿ ನಡೆದಿದೆ. ಗುರುವಾರ ರಾತ್ರಿಯಿಂದಲೇ ಪೊಲೀಸರನ್ನು ನಿಯೋಜಿಸಲಾಗಿತ್ತು. ಇಡೀ ದಿನ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಬೆಂಗಳೂರಿನಲ್ಲಿ ನಡೆದಿಲ್ಲ ಎಂದು ತಿಳಿಸಿದರು.

ಕೆಲವು ಭಾಗಗಳಲ್ಲಿ ರ್ಯಾಲಿ, ಪ್ರತಿಭಟನೆ ಮಾಡಿದಾಗ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಯಲ್ಲಿ ಇದ್ದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಹಲವರನ್ನು ಬಂಧಿಸಲಾಗಿದೆ. ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿತ್ತು. ವಿವಿಧ ಸಂಘಟನೆಗಳ ಸುಮಾರು ಒಂದೂವರೆ ಸಾವಿರದಷ್ಟು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾ ರ್ಯಾಲಿಗೆ ಮುಂದಾಗಿದ್ದ 785 ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದರು.

ಸಂಜೆಯಾಗುತ್ತಿದ್ದಂತೆಯೇ ಬೆಂಗಳೂರು ನಗರದ ಬಹುತೇಕ ಪ್ರದೇಶಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಮಲ್ಲೇಶ್ವರಂ ಭಾಗದಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿವೆ. ರಾಜ್ಯದ ಇತರ ನಗರಗಳಾದ ಮೈಸೂರು, ಹಾಸನಗಳಲ್ಲಿಯೂ ಜನಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಹಾಸನದಲ್ಲಿ ಬಂದ್ ಅವದಿ ಮುಗಿಯುತ್ತಲೇ ವರ್ತಕರು ವ್ಯಾಪಾರ ವಹಿವಾಟು ಆರಂಬಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!