15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೇಡಾ ನಗರಿ ಸಜ್ಜು

ಹೊಸದಿಗಂತ ವರದಿ ಹುಬ್ಬಳ್ಳಿ:

ಧಾರವಾಡ ಜಿಲ್ಲಾ 15 ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ. 24 ಹಾಗೂ 25ರಂದು ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ 15 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಪ್ರೊ. ಧರಣೇಂದ್ರ ಕುರುಕುರಿ ಅವರನ್ನು ಆಯ್ಕೆ ಮಾಡಲಾಗಿದೆ. ಮಾ. 24 ರಂದು ಬೆಳಿಗ್ಗೆ 8.30 ಕ್ಕೆ ಹು-ಧಾ ಮಹಾನಗರ ಪಾಲಿಕೆಯ ಉಪಮೇಯರ್ ಉಮಾ ಮುಕುಂದ ರಾಷ್ಟ್ರ ಧ್ವಜಾರೋಹಣ ಮಾಡುವರು. ಪಾಲಿಕೆ ಸದಸ್ಯೆ ರೂಪಾ ಶೆಟ್ಟಿ ಕನ್ನಡ ಧ್ವಜಾರೋಹಣ, ಪರಿಷತ್ ಧ್ವಜಾರೋಹಣ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ನೆರವೇರಿಸುವರು ಎಂದರು.

ಮೆರವಣಿಗೆ: ಬೆಳಿಗ್ಗೆ 9 ಗಂಟೆಗೆ ನಗರದ ಪ್ರವಾಸ ಮಂದಿರದಿಂದ ಸವಾಯಿ ಗಂಧರ್ವ ಭವನದವರೆಗೆ ಭವ್ಯ ಮೆರವಣಿಗೆಗೆ ಡಿಡಿಪಿಐ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಪಾಲಿಕೆ ಸದಸ್ಯ ವೀರಣ್ಣ ಸವಡಿ, ಮೀನಾಕ್ಷಿ ವಂಟಮೂರಿ ಭಾಗವಹಿಸುವರು ಎಂದು ತಿಳಿಸಿದರು.

ಬೆಳಿಗ್ಗೆ 10 ಗಂಟೆಗೆ ಸಮ್ಮೇಳನಕ್ಕೆ ಬೆಂಗಳೂರಿನ ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಬಸವರಾಜ ಸಾದರ, ಅಧ್ಯಕ್ಷತೆ ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರ, ಪುಸ್ತಕ ಲೋಕಾರ್ಪಣೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸ್ಮರಣ ಸಂಚಿಕೆ ವಿಪ ಸದಸ್ಯ ಬಸವರಾಜ ಹೊರಟ್ಟಿ, ಪುಸ್ತಕ ಮಳಿಗೆ ಚಾಲನೆ ಕಸಾಪ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಸಮ್ಮೇಳನದ ಸರ್ವಾಧ್ಯಕ್ಷ ನುಡಿ ಪ್ರೊ. ಧರಣೇಂದ್ರ ಕುರಕುರಿ, ಡಾ. ರಮಾಕಾಂತ ಜೋಶಿ, ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ ಸೇರಿದಂತೆ ಅನೇಕು ಭಾಗವಹಿಸುವರು ಎಂದು ಹೇಳಿದರು.

ಸಮ್ಮೇಳನದಲ್ಲಿ ಜಿಜ್ಞಾಸೆ, ನೆನಪುಗಳು, ಮೆಲಕು, ಅರಿವು, ಚಿಂತನೆ, ಕವಿ ಗೋಷ್ಠಿ, ಮಕ್ಕಳು ಹಿರಿಯರು ಎಂಬ ಆರು ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಕಲಾ ಪ್ರದರ್ಶನ, ಸರ್ವಾಧ್ಯಕ್ಷರ ಸಂವಾದ, ಬಹಿರಂಗ ಸಭೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸರ್ಕಾರ ಶಾಲೆಗಳ ಉಳಿವಿಗೆ ಹೋರಾಟ: ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ ಹೋರಾಟ ಮಾಡಲು ಸಿದ್ಧವಿದೆ. ಸರ್ಕಾರ ಕನ್ನಡ ಶಾಲೆಗಳಿಗೆ ಹೆಚ್ಚಿನ ಆದ್ಯತೆ ನೀಸಬೇಕು. ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಬದಲು ಇರುವಂತಹ ವಿಶ್ವವಿದ್ಯಾಲಯಗಳಿಗೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕು. ಸರ್ಕಾರಿ ಶಾಲೆಗಳ ಕಡೆಗಣನೆ ಸಾಹಿತ್ಯ ಪರಿಷತ್ ಸಹಿಸುವುದಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಸರ್ಕಾರಿ ಶಾಲೆಯ ಉಸಿಸುವಂತೆ ಸರ್ಕಾರ ಹಾಗೂ ಜನಪ್ರತಿನಿಗಳಿಗೆ ಆಗ್ರಹಿಸಲಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!