ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ಪೀಣ್ಯ ಮೇಲ್ಸೇತುವೆಯಲ್ಲಿ ಮತ್ತೊಂದು ಕಾಮಗಾರಿ ನಡೆಯಲಿದ್ದು, ಈ ಸಂಬಂಧ ಪ್ರತಿ ಬುಧವಾರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೂಲಗಳು ಮಾಹಿತಿ ನೀಡಿವೆ.
ನಿರಂತರವಾಗಿ ಎರಡು ವರ್ಷ ಸುರಕ್ಷತಾ ಕಾಮಗಾರಿ ನಿರ್ವಹಿಸಿದ್ದ ಹಾಗೂ ಬೆಂಗಳೂರಿನಿಂದ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತಿದ್ದ ಈ ಮೇಲ್ಸೇತುವೆಯಲ್ಲಿ ಮತ್ತೆ ಗ್ರೌಟಿಂಗ್ ಕಾಮಗಾರಿ ನಡೆಸಲು ತಿರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ಬುಧವಾರ ಬೆಳಗ್ಗೆ 6 ಗಂಟೆಯಿಂದ ಗುರುವಾರ ಬೆಳಗ್ಗೆ 6 ಗಂಟೆಗೆ ವರೆಗೆ ಟ್ರಕ್/ಲಾರಿಗಳಿಗೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಿಂದ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಕಡೆಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾರಾಂತ್ಯದಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಿರುತ್ತದೆ. ಪ್ರಯಾಣಿಕರ ಹಿತರಕ್ಷಣೆ ದೃಷ್ಟಿಯಿಂದ, ವಾಹನ ದಟ್ಟಣೆ ನಿವಾರಣೆಗೆ ಮುಂದಿನ ಫೆಬ್ರವರಿ 26ರಿಂದ ಜಾರಿಗೆ ಬರುವಂತೆ ಈ ಗ್ರೌಟಿಂಗ್ ಕಾಮಗಾರಿ ಕೆಲಸ ಮರು ನಿಗದಿಗೊಳಿಸಲಾಗಿದೆ.
ಈ ಹಿಂದೆಯು ಇದೇ ಗ್ರೌಟಿಂಗ್ ಕಾಮಗಾರಿ ನಡೆಸಲಾಗಿತ್ತು. ಆಗಲೂ ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 06 ಗಂಟೆವರೆಗೆ ಒಟ್ಟು 24 ಗಂಟೆಗೆವರೆಗೆ ವಾಹನಗಳಿಗೆ ನಿರ್ಬಂಧಿಸಲಾಗಿತ್ತು.
ಪರ್ಯಾಯ ಮಾರ್ಗ ಯಾವುದು?: ಬೆಂಗಳೂರು ನಗರ ಭಾಗದಿಂದ ಪೀಣ್ಯ ಮೇಲ್ಸೇತುವೆ ಮಾರ್ಗವಾಗಿ ಸಂಚರಿಸುವ ಬೃಹತ್ ವಾಹನಗಳು, ಲಾರಿಗಳು ಸಿಎಂಐಟಿ ಜಂಕ್ಷನ್ ಫ್ಲೈಓವರ್ ಕೆಳಗಿರುವ ತುಮಕೂರು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ತುಮಕೂರು ರಸ್ತೆಯಿಂದ ಪೀಣ್ಯ ಮೇಲ್ಸೇತುವೆಯಲ್ಲಿ ಸಂಚರಿಸುವ ಭಾರೀ ವಾಹನಗಳು ಕೆನ್ನೆಮೆಟಲ್, ಸರ್ವೀಸ್ ರಸ್ತೆ ಮೂಲಕ ಗೊರಗುಂಟೆಪಾಳ್ಯ ಕಡೆ ಸಾಗಬೇಕು.