ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಸಾಂಸದ ಪ್ರಜ್ವಲ್ ರೇವಣ್ಣಗೆ ಎಸ್‌ಐಟಿ ಡ್ರಿಲ್ ಆರಂಭವಾಗಿರುವ ಬೆನ್ನಿಗೇ ವಿದೇಶಾಂಗ ಸಚಿವಾಲಯವೂ ಭರ್ಜರಿ ಶಾಕ್ ನೀಡಿದೆ.
ರೇವಣ್ಣ ಹೊಂದಿರುವ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದತಿ ಸಂಬಂಧ ಜೂ.2ರ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವಾಲಯದ ವಕ್ತಾರ ರಣಧೀರ ಜೈಸ್ವಾಲ್, ಪಾಸ್‌ಪೋರ್ಟ್ ರದ್ಧತಿ ಸಂಬಂಧ ಮೇ 21ರಂದು ಕರ್ನಾಟಕ ಸರ್ಕಾರ ಮನವಿ ಸಲ್ಲಿಸಿದೆ.
ಇದರ ಬೆನ್ನಿಗೇ ಅಂದರೆ ಮೇ 23ರಂದು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯನ್ವಯ ಪ್ರಜ್ವಲ್ ಪಾಸ್‌ಪೋರ್ಟ್ ರದ್ದತಿಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭವಾಗಿದ್ದು, ಪ್ರಜ್ವಲ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಹತ್ತು ದಿನಗಳ ಒಳಗಾಗಿ ಈ ನೋಟಿಸ್‌ಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಲಾಗಿದ್ದು, ಅವರ ಪ್ರತಿಕ್ರಿಯೆ ಸ್ವೀಕರಿಸಿದ ಬಳಿಕ ಇಲ್ಲವೇ 10 ದಿನಗಳ ಗಡುವು ಮುಗಿದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.