ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿ ಯೋಜನೆಯ ಎರಡು ತಿಂಗಳ ಬಾಕಿ ಹಣದ ವಿಚಾರ ಇಂದು ವಿಧಾನಸಭೆಯಲ್ಲಿ ಭಾರೀ ಹಂಗಾಮಗೆ ಕಾರಣವಾಯಿತು. ಯೋಜನೆಯ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬಾಕಿ ಇರುವುದನ್ನು ಒಪ್ಪಿಕೊಂಡರೂ, ಅವರು ನೀಡಿದ ಸ್ಪಷ್ಟನೆಗೆ ಸಮಾಧಾನಗೊಳ್ಳದ ವಿಪಕ್ಷಗಳು ಕ್ಷಮೆಯಾಚನೆಗೆ ಪಟ್ಟು ಹಿಡಿದವು. ಮಾತಿನ ಚಕಮಕಿ ತಾರಕಕ್ಕೇರಿದಾಗ ಸಚಿವೆ ಇದನ್ನು “ಮಹಿಳೆ ಎಂಬ ಕಾರಣಕ್ಕೆ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ತಿರುಗೇಟು ನೀಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷಗಳು, ಸದನದಲ್ಲಿ ಸಚಿವರು ಸಮಾನರು ಎಂದು ಹೇಳುತ್ತಾ ಸಭಾತ್ಯಾಗ ಮಾಡಿದವು.
ಮಹಿಳೆಯರ ಖಾತೆಗೆ ಕಳೆದ ಎರಡು ತಿಂಗಳಿನಿಂದ ಹಣ ಜಮೆಯಾಗಿಲ್ಲ ಎಂದು ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ತಕ್ಷಣ ಕ್ಷಮೆ ಕೇಳುವಂತೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಹೆಬ್ಬಾಳ್ಕರ್, “ಈಗಾಗಲೇ ದೊಡ್ಡ ಮೊತ್ತದ ಹಣವನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ. ತಾಂತ್ರಿಕ ಕಾರಣದಿಂದ ವಿಳಂಬವಾಗಿರಬಹುದು, ನಾನು ವಿಷಾದ ವ್ಯಕ್ತಪಡಿಸಿದ್ದೇನೆ” ಎಂದರು. ಅಲ್ಲದೆ, “ನಾನು ಒಬ್ಬ ಮಹಿಳೆ ಎಂಬ ಕಾರಣಕ್ಕೆ ನನ್ನನ್ನು ಇಷ್ಟೊಂದು ಒತ್ತಡಕ್ಕೆ ಸಿಲುಕಿಸುತ್ತಿದ್ದೀರಾ?” ಎಂದು ಪ್ರಶ್ನಿಸುವ ಮೂಲಕ ಭಾವನಾತ್ಮಕ ತಿರುಗೇಟು ನೀಡಿದರು.
ಅಶೋಕ್ ಅವರು, “ಇಲ್ಲಿ ಸ್ತ್ರೀ-ಪುರುಷ ಎಂಬ ಭೇದವಿಲ್ಲ, ನಮಗೆ ಬೇಕಿರುವುದು ಮಂತ್ರಿಗಳ ಜವಾಬ್ದಾರಿಯುತ ಉತ್ತರ. ಬಾಕಿ ಹಣದ ಬಗ್ಗೆ ಸ್ಪಷ್ಟನೆ ಇಲ್ಲದ ಕಾರಣ ನಾವು ಸಭಾತ್ಯಾಗ ಮಾಡುತ್ತೇವೆ” ಎಂದು ಘೋಷಿಸಿ ಹೊರನಡೆದರು.

