ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರವಾಹಪೀಡಿತರಿಗೆ ಪರಿಹಾರ ಕೊಡೋಕೆ ನಾನು ಮಿನಿಸ್ಟರ್ ಅಲ್ಲ ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ವಿಪತ್ತು ಪರಿಹಾರ ನೀಡಲು ತಮ್ಮ ಬಳಿ ಯಾವುದೇ ಸಂಪುಟ ಸ್ಥಾನವಿಲ್ಲ, ಹಣವೂ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಆಡಳಿತಾರೂಢ ಕಾಂಗ್ರೆಸ್‌ನಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಹಾಗೇ, ಮಂಡಿಯ ಜನರು ಕೂಡ ಕಂಗನಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಂಡಿಯಿಂದ ಸ್ಪರ್ಧಿಸಿ ಭಾರೀ ಬಹುಮತದಿಂದ ಜಯ ಗಳಿಸಿದ್ದ ಕಂಗನಾ ರಣಾವತ್ ಮತ್ತೊಮ್ಮೆ ವಿವಾದದಿಂದ ಸುದ್ದಿಯಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಅತ್ಯಂತ ಹಾನಿಯಾಗಿರುವ ಜಿಲ್ಲೆಗಳಲ್ಲಿ ಮಂಡಿ ಕೂಡ ಒಂದು.
ಮಂಡಿ ಸಂಸದೆಯಾಗಿರುವ ಕಂಗನಾ ಪ್ರವಾಹಪೀಡಿತರಿಗೆ ಪರಿಹಾರ ಧನ ಬಿಡುಗಡೆ ಮಾಡಿಸುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿಪತ್ತು ಪರಿಹಾರಕ್ಕೆ ನನ್ನ ಬಳಿ ಸಂಪುಟ ಸ್ಥಾನವಿಲ್ಲ. ನಾನು ಕೇವಲ ಸಂಸದೆಯಷ್ಟೇ. ನನ್ನ ಬಳಿ ಪರಿಹಾರ ನಿಧಿಯಿಲ್ಲ, ವಿಪತ್ತು ಪರಿಹಾರಕ್ಕೆ ಹಣವಿಲ್ಲ, ಯಾವುದೇ ಸಂಪುಟ ಹುದ್ದೆಯೂ ಇಲ್ಲ. ಸಂಸದರಿಗೆ ಸಂಸತ್ತಿಗೆ ಸೀಮಿತವಾದ ಕೆಲಸವಿದೆ ಎಂದು ನಗುತ್ತಾ ವರದಿಗಾರರಿಗೆ ಹೇಳಿದ್ದಾರೆ.