ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಲ್ಲಿ ಸ್ಥಾನ ಪಡೆಯೋದು ಮ್ಯೂಸಿಕಲ್ ಚೇರ್ ಆಡಿದಂತಾಗಿದೆ. ನಾಯಕರ ಈ ಚೇರ್ ಆಸೆಗೆ ರಾಜ್ಯದ ಜನ ಬಲಿಯಾಗುತಿದ್ದಾರೆ. ಜನಗಳಿಗೆ ತೆರಿಗೆ ಹಾಕಿ ಲೂಟಿ ಮಾಡುತಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಅನುದಾನ ಪಡೆಯಬೇಕಾದರೆ ಸುರ್ಜೆವಾಲ ಅವರ ಬಳಿ ತೆರಳಬೇಕಾದ ಸ್ಥಿತಿ ಉಂಟಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರೇ ನಿಜವಾಗಿ ಮುಖ್ಯಮಂತ್ರಿ ಎಂಬ ವಿಚಾರವೂ ಜನರಲ್ಲಿ ಅನುಮಾನ ಹುಟ್ಟಿಸಿರುವುದಾಗಿ ನಿಖಿಲ್ ಹೇಳಿದರು. “ಸೂಪರ್ ಸಿಎಂ ಯಾರು ಎಂಬ ಚರ್ಚೆ ಜನಗಳಲ್ಲಿ ನಡೆಯುತ್ತಿದೆ. ಸಿಎಂ ಇದ್ದಾರೆ, ಡಿಸಿಎಂ ಅವರ ಸ್ಥಾನಕ್ಕೆ ಇತರರು ಕಣ್ಣು ಹಾಕಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಒಟ್ಟಿನಲ್ಲಿ ಇದು ಮ್ಯೂಸಿಕಲ್ ಚೇರ್ ಆಟವಾಗಿದೆ,” ಎಂದು ವಾಗ್ದಾಳಿ ನಡೆಸಿದರು.
ಇಂತಹ ಅಧಿಕಾರದ ಲಾಲಸೆ ಮುಂದುವರೆದರೆ, ಇದರ ಬೆಲೆ ರಾಜ್ಯದ ಸಾಮಾನ್ಯ ಜನತೆಗೆ ತೆರಿಗೆ ರೂಪದಲ್ಲಿ ಕಟ್ಟಿ ಕೊಡುವಂತಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. “ಜನರಿಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ ಜನರಿಗೆ ನೆರವಾಗುವ ಬದಲು, ಅಧಿಕಾರಕ್ಕಾಗಿ ಒಬ್ಬ ಮತ್ತೊಬ್ಬನನ್ನು ಹಿಂದೆ ತಳ್ಳುವ ರಾಜಕೀಯ ನಡೆಯುತ್ತಿದೆ,” ಎಂದರು.