ಹೊಸದಿಗಂತ ಡಿಜಿಟಲ್ ಡೆಸ್ಕ್:
ಹುಲಿ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಕೋಪಗೊಂಡ ಗ್ರಾಮಸ್ಥರ ಗುಂಪೊಂದು ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿರುವ ಘಟನೆಯೊಂದು ಮಹಾರಾಷ್ಟ್ರದ ಬಾಂದ್ರಾ ಜಿಲ್ಲೆಯಲ್ಲಿ ನಡೆದಿದೆ.
ದಾಳಿಯಲ್ಲಿ ಗಾಯಗೊಂಡಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮತ್ತು ಇಬ್ಬರು ಅರಣ್ಯ ಸಿಬ್ಬಂದಿಗಳು ನಾಗ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಂದ್ರಾದ ಪಯೋನಿ ತಹಸಿಲ್‌ನ ಖಟ್ಖೇಡಾ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಈಶ್ವರ್ ಮೋಟ್‌ಘರೆ (52) ವ್ಯಕ್ತಿಯ ಮೇಲೆ ದಾಳಿ ಹುಲಿ ದಾಳಿ ನಡೆಸಿ, ವ್ಯಕ್ತಿಯನ್ನು ಕೊಂದು ಹಾಕಿತ್ತು. ಘಟನೆ ಬಳಿಕ ಅರಣ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಹುಲಿ ಹಿಡಿಯಲು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗ್ರಾಮಸ್ಥರು ದಾಳಿ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ.
ಘಟನೆ ಬಳಿಕ ಗಾಯಗೊಂಡ ಅರಣ್ಯ ಸಿಬ್ಬಂದಿಗಳನ್ನು ನಾಗ್ಪುರದ ಆಸ್ಪತ್ರೆಗೆ ದಾಖಲಿಸಲಾಯಿತು, ನಂತರ ಮಹಾರಾಷ್ಟ್ರ ಅರಣ್ಯ ಇಲಾಖೆಯ ಇತರೆ ಸಿಬ್ಬಂದಿಗಳು ಹುಲಿಯನ್ನು ಸೆರೆಹಿಡಿದು, ನಾಗಪುರದ ಗೊರೆವಾಡ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಈ ನಡುವೆ ಹುಲಿ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) 30,000 ರೂಪಾಯಿ ಪರಿಹಾರ ಮತ್ತು 9.70 ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ.