ಹೊಸದಿಗಂತ ಡಿಜಿಟಲ್ ಡೆಸ್ಕ್:
ಆನ್‌ಲೈನ್ ಗೇಮಿಂಗ್, (online gaming) ಕ್ಯಾಸಿನೋಗಳು ಮತ್ತು ಇತರ ಗೇಮ್ಸ್ ಮೇಲೆ ಶೇಕಡಾ 28ರಷ್ಟು ತೆರಿಗೆ ವಿಧಿಸಲು, ಜಿಎಸ್‌ಟಿ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ತಿದ್ದುಪಡಿ ಮಸೂದೆಗಳನ್ನು ಮಂಡಿಸಿದ್ದಾರೆ.
ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023, ಸಮಗ್ರ ಸರಕು ಮತ್ತು ಸೇವಾ ತೆರಿಗೆ (ತಿದ್ದುಪಡಿ) ಮಸೂದೆ 2023ನ್ನು ಲೋಕಸಭೆ ಗದ್ದಲದ ನಡುವೆಯು ಹಣಕಾಸು ಸಚಿವೆ ಮಂಡಿಸಿದ್ದಾರೆ. ಒಮ್ಮೆ ಕಾನೂನುಗಳ ತಿದ್ದುಪಡಿ ಅಂಗೀಕರಿಸಿದ ನಂತರ, ರಾಜ್ಯಗಳ ಜಿಎಸ್‌ಟಿ ಕಾನೂನಿನಲ್ಲೂ ಇದೇ ರೀತಿಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಕ್ಯಾಸಿನೊಗಳು, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಗೇಮಿಂಗ್‌ಗಳಲ್ಲಿನ ಸರಬರಾಜುಗಳ ತೆರಿಗೆಯ ಸ್ಪಷ್ಟತೆ ತಿಳಿಸಲು, 2017ರ CGST ಕಾಯಿದೆಯ ಶೆಡ್ಯೂಲ್ IIIರಲ್ಲಿ ಕೆಲವೊಂದು ನಿಬಂಧನೆಯನ್ನು ತಿದ್ದುಪಡಿ ಮಾಡಲು ಹಣಕಾಸು ಇಲಾಖೆ ಮುಂದಾಗಿದೆ. IGST ಕಾಯಿದೆಯಲ್ಲಿನ ತಿದ್ದುಪಡಿಯು ಆನ್‌ಲೈನ್ ಗೇಮಿಂಗ್‌ಗೆ GST ವಿಧಿಸುವ ನಿಬಂಧನೆಗೆ ಸಂಬಂಧಿಸಿದ್ದು. ಇಂತಹ ಗೇಮಿಂಗ್ ಘಟಕಗಳು ಭಾರತದ GST ನೋಂದಣಿಯನ್ನು ಪಡೆಯುವುದು ಅಗತ್ಯ ಎಂಬುದನ್ನು ತಿಳಿಸಲಾಗಿದೆ.
ವಿದೇಶ ಆನ್‌ಲೈನ್ ಗೇಮಿಂಗ್ ಪ್ಲಾಟ್ಫಾರ್ಮ್ಗಳು ನೋಂದಣಿ ಮತ್ತು ತೆರಿಗೆ ಪಾವತಿಯ ನಿಬಂಧನೆಗಳನ್ನು ಅನುಸರಿಸದಿದ್ದಲ್ಲಿ ಭಾರತದೊಳಗೆ ಈ ಗೇಮಿಂಗ್ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂಬುದನ್ನು ಈ ತಿದ್ದುಪಡಿಯಲ್ಲಿ ತಿಳಿಸಲಾಗಿದೆ. ಕಳೆದ ವಾರ ಜಿಎಸ್‌ಟಿ ಕೌನ್ಸಿಲ್ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ಇಂಟಿಗ್ರೇಟೆಡ್ ಜಿಎಸ್‌ಟಿ (ಐಜಿಎಸ್‌ಟಿ) ಕಾನೂನುಗಳಿಗೆ ತಿದ್ದುಪಡಿಗಳನ್ನು ಅನುಮೋದಿಸಿತ್ತು.