ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ (Chamarajanagara District Hospital) ಸಂಭವಿಸಿದ ಆಕ್ಸಿಜನ್ ದುರಂತದಲ್ಲಿ (Oxygen tragedy) ಮೃತಪಟ್ಟವರ ಕುಟುಂಬಗಳಿಗೆ ಖಾಯಂ ಉದ್ಯೋಗ (Permanent job to Family members of deceased family) ನೀಡುವುದಕ್ಕೆ ಸಂಬಂಧಿಸಿ ಪ್ರಸ್ತಾವನೆ ಕಳುಹಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಆಕ್ಸಿಜನ್ ದುರಂತದ ಈಗಿನ ವಾಸ್ತವಿಕ ಸ್ಥಿತಿಗತಿ ಏನಿದೆ ಎಂದು ಸಿಎಂ ವಿಚಾರಿಸಿದರು.
ಆಕ್ಸಿಜನ್ ದುರಂತದಲ್ಲಿ 32 ಜನ ಮೃತಪಟ್ಟಿದ್ದರು. ಅವರ ಮನೆಯವರಿಗೆ ಸರ್ಕಾರಿ ಉದ್ಯೋಗ ನೀಡಲು ಸೂಚನೆ ನೀಡಲಾಗಿತ್ತು. ಹೊರಗುತ್ತಿಗೆ ಉದ್ಯೋಗ ಕೊಡುವುದು ಬೇಡ, ಖಾಯಂ ಉದ್ಯೋಗ ನೀಡೋಣ ಅಂತ ಪ್ರಯತ್ನ ಮಾಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾಹಿತಿ ನೀಡಿದರು.
ಮೃತರಿಗೆ ಪರಿಹಾರ ನೀಡಲೂ ತಾರತಮ್ಯ ಆಗಿದೆ. ದುರಂತ ನಡೆದ ದಿನ ಮೃತಪಟ್ಟವರಿಗೆ 5 ಲಕ್ಷ ರೂ. ಕೊಡಲಾಗಿದೆ. ಮರುದಿನ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಮೃತಪಟ್ಟವರಿಗೆ 2 ಲಕ್ಷ ರೂ. ನೀಡಲಾಗಿದೆʼ ಎಂದು ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿ ಮಾಹಿತಿ ನೀಡಿದರು.
ನೇಮಕಾತಿ ಪ್ರಕ್ರಿಯೆ ಮೀರಿ ಹೇಗೆ ಉದ್ಯೋಗ ನೀಡಲು ಸಾಧ್ಯ ಎಂಬ ಜಿಜ್ಞಾಸೆ ಕಾಡಿದಾಗ ಮೊದಲು ವಿಶೇಷ ಪ್ರಕರಣ ಎಂದು ಪ್ರಸ್ತಾವನೆ ಕಳುಹಿಸಿ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ ನೀಡಿದರು. ಸಿಎಂ ಸಿದ್ದರಾಮಯ್ಯ ಅವರು ಈ ಸಲಹೆಯನ್ನು ಅನುಮೋದಿಸಿದರು.