ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಟಿನ್ ಜತೆಗಿನ ಮಾತುಕತೆ ಅತ್ಯಂತ ಚೆನ್ನಾಗಿ ನಡೆದಿದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕದನ ವಿರಾಮ ಅಲ್ಲ, ಶಾಶ್ವತ ಶಾಂತಿ ಒಪ್ಪಂದ ಏರ್ಪಡಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ದ್ವಿಪಕ್ಷೀಯ ಮಾತುಕತೆಯ ನಂತರ ಟ್ರಂಪ್ ಮಹತ್ವದ ಘೋಷಣೆ ಮಾಡಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸಹ ಅಮೆರಿಕಕ್ಕೆ ಬರಲಿದ್ದು, ಅವರ ಜತೆಗೂ ಮಾತುಕತೆ ನಡೆಯಲಿದೆ. ನಂತರದಲ್ಲಿ ಒಪ್ಪಂದ ಏರ್ಪಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.
‘ಅಲಾಸ್ಕಾದಲ್ಲಿ ಒಂದು ಅದ್ಭುತ ಮತ್ತು ಅತ್ಯಂತ ಯಶಸ್ವಿ ದಿನ! ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಸಭೆ ತುಂಬಾ ಚೆನ್ನಾಗಿ ನಡೆಯಿತು, ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ನ್ಯಾಟೋದ (NATO) ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಯುರೋಪಿಯನ್ ನಾಯಕರೊಂದಿಗೆ ತಡರಾತ್ರಿಯ ಫೋನ್ ಕರೆಯೂ ನಡೆಯಿತು. ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧ ಕೊನೆಗೊಳಿಸಲು ನೇರವಾಗಿ ಶಾಂತಿ ಒಪ್ಪಂದ ಮಾಡಿಕೊಳ್ಳುವುದೇ ಉತ್ತಮ ಮಾರ್ಗವೆಂದು ಎಲ್ಲರೂ ನಿರ್ಧರಿಸಿದ್ದಾರೆ. ಇದರಿಂದ ಯುದ್ಧ ಕೊನೆಯಾಗಲಿದೆ. ಇದು ಕೇವಲ ಕದನ ವಿರಾಮ ಒಪ್ಪಂದವಲ್ಲ, ಶಾಶ್ವತ ಶಾಂತಿ ಒಪ್ಪಂದ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೋಮವಾರ ಮಧ್ಯಾಹ್ನ ವಾಷಿಂಗ್ಟನ್ ಡಿಸಿ, ಓವಲ್ ಕಚೇರಿಗೆ ಬರಲಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ನಾವು ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಸಭೆ ನಿಗದಿಪಡಿಸುತ್ತೇವೆ. ಇದು ಲಕ್ಷಾಂತರ ಜನರ ಜೀವಗಳನ್ನು ಉಳಿಸುವ ಸಾಧ್ಯತೆಯಿದೆ’ ಎಂದು ಎಕ್ಸ್ ಸಂದೇಶದಲ್ಲಿ ಟ್ರಂಪ್ ಉಲ್ಲೇಖಿಸಿದ್ದಾರೆ.
ಇದರೊದಿಗೆ, ರಷ್ಯಾ ಹಾಗೂ ಉಕ್ರೇನ್ ನಡುವಣ ವರ್ಷಗಳ ಯುದ್ಧ ಕೊನೆಯಾಗುವ ಸಾಧ್ಯತೆ ಗೋಚರಿಸಿದೆ. ಆದಾಗ್ಯೂ, ಈ ಹೇಳಿಕೆ ಬಿಡುಗಡೆ ಮಾಡುವ ಕೆಲವೇ ಕ್ಷಣಗಳ ಮುನ್ನ ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಟ್ರಂಪ್, ಉಕ್ರೇನ್ ಯದ್ಧವು ಪ್ರಾದೇಶಿಕ ವಿನಾಯಿತಿಗಳೊಂದಿಗೆ ಕೊನೆಗೊಳ್ಳಲಿದೆ. ಉಕ್ರೇನ್ ಹಾಗೂ ರಷ್ಯಾ ಮಧ್ಯೆ ಭೂ ವಿನಿಮಯ ಒಪ್ಪಂದ ಏರ್ಪಡಲಿದೆ. ಅದೇ ರೀತಿ, ಉಕ್ರೇನ್ಗೆ ಅಮೆರಿಕವು ಸಂಭಾವ್ಯ ಭದ್ರತೆಯ ಖಾತರಿ ಒದಗಿಸುವ ಬಗ್ಗೆಯೂ ಚರ್ಚೆಯಾಗಿದೆ ಎಂದಿದ್ದರು.