ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ನಿರೀಕ್ಷಿತ ‘ಡೆವಿಲ್’ ಸಿನಿಮಾ ಶೂಟಿಂಗ್ ಕೊನೆಯ ಹಂತಕ್ಕೆ ಕಾಲಿಟ್ಟಿದೆ. ಟಾಕಿ ಭಾಗ ಸಂಪೂರ್ಣ ಮುಗಿದಿದ್ದು, ಈಗ ಉಳಿದಿರುವುದು ಕೇವಲ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಒಂದು ಹಾಡಿನ ಚಿತ್ರೀಕರಣ ಮಾತ್ರ. ಈ ಹಾಡು ಶೂಟ್ ಆದ ಮೇಲೆ ಸಿನಿಮಾ ಬಿಡುಗಡೆಗೆ ಎಲ್ಲವೂ ಸಿದ್ಧವಾಗುತ್ತದೆ. ಜುಲೈ 14ರಿಂದ 10 ದಿನಗಳ ಕಾಲ ದರ್ಶನ್ ನೇತೃತ್ವದ ತಂಡ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದೆ. ಆದರೆ ಈ ವಿದೇಶ ಪ್ರಯಾಣ ಹೀರೋಗೆ ಸುಲಭವಾಗಿಲ್ಲ. ಹತ್ಯೆ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಹಲವು ಕಟ್ಟುನಿಟ್ಟಿನ ಷರತ್ತುಗಳನ್ನೇ ವಿಧಿಸಿದೆ.
ವಿದೇಶಿ ಚಿತ್ರೀಕರಣಕ್ಕೆ ಪ್ರಯತ್ನಿಸಿದಾಗ ಯುರೋಪ್ ದೇಶಗಳಿಂದ ಅನುಮತಿ ಸಿಗದೆ ಚಿತ್ರತಂಡ ದಿಕ್ಕು ಬದಲಿಸಿ ಥಾಯ್ಲೆಂಡ್ ಆಯ್ಕೆ ಮಾಡಿದೆ. ಇದೀಗ ಚಿತ್ರತಂಡ ಕೋರ್ಟ್ ಅನುಮತಿ ಪಡೆದು ದರ್ಶನ್‌ಗೆ ಶೂಟಿಂಗ್‌ಗೆ ಕರೆದುಕೊಂಡು ಹೋಗುತ್ತಿದೆ. ಈ ಪ್ರಯಾಣಕ್ಕೆ ಕೋರ್ಟ್ ನೀಡಿರುವ 10 ಪ್ರಮುಖ ಷರತ್ತುಗಳಿವು:
ದರ್ಶನ್ ಆರೋಗ್ಯದ ಸಂಪೂರ್ಣ ಜವಾಬ್ದಾರಿ ನಿರ್ಮಾಣ ಸಂಸ್ಥೆಯದ್ದೇ ಆಗಿರಬೇಕು.
ಶೂಟಿಂಗ್ ವೇಳೆ ದೇಹಕ್ಕೆ ಯಾವುದೇ ಗಾಯ ಆಗದಂತೆ ಕಾಳಜಿ ವಹಿಸಬೇಕು.
ಥಾಯ್ಲೆಂಡ್ ಪ್ರವಾಸ 10 ದಿನಗಳ ವೀಸಾದೊಳಗೆ ಮುಗಿಸಿ ದೇಶಕ್ಕೆ ಹಿಂದಿರುಗಬೇಕು.
ಪ್ರಕರಣದ ಸಾಕ್ಷ್ಯಗಳ ಮೇಲೆ ಯಾವುದೇ ರೀತಿಯ ಹಸ್ತಕ್ಷೇಪ ಅಥವಾ ನಾಶದ ಯತ್ನವಿರಬಾರದು.
ಆರೋಪಿಯನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದು ಖಚಿತಪಡಿಸಬೇಕು.
ಶೂಟಿಂಗ್ ಸಂದರ್ಭ ಯಾರೊಟ್ಟಿಗೂ ಜಗಳ ಅಥವಾ ಗಲಾಟೆ ಮಾಡಬಾರದು.
ದರ್ಶನ್‌ನ ಸಂಪೂರ್ಣ ನಿಯಂತ್ರಣ ನಿರ್ಮಾಣ ತಂಡದ ಮೇಲಿರುತ್ತದೆ.
ಮುಂದಿನ ವಿಚಾರಣೆಗೆ ತಪ್ಪದೇ ಹಾಜರಾಗಬೇಕು.
ವಿದೇಶಕ್ಕೆ ತೆರಳಲು ಬಾಂಡ್ ಹಾಗೂ ಶ್ಯೂರಿಟಿ ನೀಡಬೇಕು.
ಈ ಷರತ್ತುಗಳನ್ನೇನಾದರೂ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕು.
ಥಾಯ್ಲೆಂಡ್ ಶೂಟ್ ವೇಳಾಪಟ್ಟಿ ಹೇಗಿರಲಿದೆ?
ಐದು ದಿನ ರಚನಾ ರೈ ಜತೆ ಡುಯೆಟ್ ಹಾಡಿನ ಶೂಟ್ ನಡೆಯಲಿದೆ. ಉಳಿದ ಐದು ದಿನ ರೆಸ್ಟ್ ಅಥವಾ ಸ್ಟಾಕ್‌ಶಾಟ್‌ಗಳಿಗೆ ಮೀಸಲಿರಲಿದೆ. ಜುಲೈ 24ರಂದು ಟೀಂ ಭಾರತಕ್ಕೆ ವಾಪಸ್ ಆಗಲಿದ್ದು, ನಂತರ ಡೆವಿಲ್ ರಿಲೀಸ್‌ಗೆ ದಿನಗಣನೆ ಆರಂಭವಾಗಲಿದೆ.