March 22, 2026
Sunday, March 22, 2026
spot_img

ವಾಟ್ಸಾಪ್ ಸ್ಟೇಟಸ್‌ನಲ್ಲಿ ವಿಕೃತಿ: ರಾಷ್ಟ್ರಧ್ವಜ, ಭಗವದ್ಗೀತೆಗೆ ಚಪ್ಪಲಿ ಇಟ್ಟು ಅವಮಾನಿಸಿದ ಕಿಡಿಗೇಡಿಗಳು

ಹೊಸದಿಗಂತ ರಾಯಚೂರು:

ನಗರದಲ್ಲಿ ರಾಷ್ಟ್ರಧ್ವಜ ಹಾಗೂ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಗೆ ಅಪಮಾನ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಯುವಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಗರದ ಎಲ್.ಬಿ.ಎಸ್ ನಗರದ ನಿವಾಸಿಗಳಾದ ನವಾಜ್ ಮತ್ತು ಸೋಹೈಲ್ ಎಂಬುವವರು ರಾಷ್ಟ್ರಧ್ವಜದ ಮೇಲೆ ಭಗವದ್ಗೀತೆಯನ್ನು ಇಟ್ಟು, ಅದರ ಮೇಲೆ ಚಪ್ಪಲಿ ಕಾಲಿಟ್ಟಿರುವ ವಿಡಿಯೋವನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದರು. ಕಳೆದ ಅಕ್ಟೋಬರ್ 25, 2025 ರಂದು ಈ ವಿಡಿಯೋ ಅಪ್‌ಲೋಡ್ ಆಗಿತ್ತೆನ್ನಲಾಗಿದ್ದು, ಇತ್ತೀಚೆಗೆ ಫೆಬ್ರವರಿ 12 ರಂದು ಪೊಲೀಸ್ ಕಾಲೋನಿಯ ವಿನಯ್ ಎಂಬುವವರ ಗಮನಕ್ಕೆ ಬಂದಿದೆ.

ವಿನಯ್ ತಕ್ಷಣವೇ ಈ ವಿಷಯವನ್ನು ಗೆಳೆಯ ಆಂಜನೇಯ ಅವರಿಗೆ ತಿಳಿಸಿದ್ದು, ಬಳಿಕ ಹಿಂದೂ ಸಂಘಟನೆಯ ಪ್ರಮುಖರಾದ ಕಾರ್ತಿಕ್ ರೆಡ್ಡಿ ಅವರ ಗಮನಕ್ಕೆ ತರಲಾಯಿತು. ರಾಷ್ಟ್ರದ ಅಸ್ಮಿತೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದನ್ನು ಖಂಡಿಸಿ, ಫೆಬ್ರವರಿ 13 ರಂದು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದೂರಿನ ಅನ್ವಯ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 299 ಹಾಗೂ 3(5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

“ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ವಿಡಿಯೋ ಯಾವ ಪ್ರೊಫೈಲ್‌ನಿಂದ ಅಪ್‌ಲೋಡ್ ಆಗಿದೆ ಎಂಬ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾರನ್ನೂ ಬಂಧಿಸಿಲ್ಲ,” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !