ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕಾಡುಗೋಡಿಯ ಚನ್ನಸಂದ್ರದಲ್ಲಿ ತಾಯಿ ಮತ್ತು ಮಗಳು ಸ್ನಾನ ಮಾಡುತ್ತಿದ್ದ ವೇಳೆ ಅವರ ವಿಡಿಯೋ ಮಾಡುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಮಂಗಳವಾರ ಬೆಳಗ್ಗೆ 6.30ರ ಸುಮಾರಿಗೆ ತಾಯಿ ಮತ್ತು ಮಗಳು ತಮ್ಮ ಮನೆ ಬಾತ್‌ರೂಮ್‌ಗೆ ಸ್ನಾನಕ್ಕೆ ತೆರಳಿದ್ದರು. ಈ ಸಂದರ್ಭ ಕಿಟಕಿಯ ಬಳಿ ಕಾದಿದ್ದ ಮೊಯಿನುದ್ದೀನ್, ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡುತ್ತಿದ್ದನು. ಇದನ್ನು ಬಾಲಕಿ ಗಮನಿಸಿ ತಕ್ಷಣವೇ ತಂದೆಗೆ ಮಾಹಿತಿ ನೀಡಿದ್ದಳು. ತಂದೆ ಹೊರಗೆ ಓಡಿ ಬಂದು ನೋಡುವಷ್ಟರಲ್ಲೇ ಕಾಮುಕ ಅಲ್ಲಿಂದ ಪರಾರಿಯಾಗಿದ್ದ.
ಆತನ ನಡೆಗೆ ಭಯಭೀತರಾದ ಕುಟುಂಬಸ್ಥರು ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ತೀವ್ರತೆಯನ್ನು ಮನಗಂಡ ಪೊಲೀಸರು ತನಿಖೆ ಆರಂಭಿಸಿ, ಮೊಯಿನುದ್ದೀನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆತನ ಮೊಬೈಲ್‌ನಲ್ಲಿ ವಿಡಿಯೋ ಇರುವುದು ದೃಢಪಟ್ಟಿದ್ದು, ಅದನ್ನು ಕೂಡ ಡಿಲೀಟ್ ಮಾಡಲಾಗಿದೆ.
ಬಂಧಿತ ಮೊಯಿನುದ್ದೀನನ್ನು ಕಾನೂನು ಪ್ರಕ್ರಿಯೆಯಂತೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಅಲ್ಲಿಂದ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ.