ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಕಂಬಳವನ್ನು ನಿಲ್ಲಿಸುವಂತೆ ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸಂಸ್ಥೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಕಳೆದ ವರ್ಷ ಬೆಂಗಳೂರಲ್ಲಿ ಕಂಬಳ ಅದ್ದೂರಿಯಾಗಿ ನಡೆದಿತ್ತು, ಅಂತೆಯೇ ಈ ವರ್ಷ ಕೂಡ ಅಕ್ಟೋಬರ್ 26 ರಂದು ಆಯೋಜನೆ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಕಂಬಳ ಆಯೋಜನೆ ಪ್ರಶ್ನಿಸಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆ ಆಗಿದೆ.
ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಅರ್ಜಿಯನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂಬಂಧ ಜುಲೈನಲ್ಲಿ ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಅದು ಇನ್ನೂ ವಿಚಾರಣೆಗೆ ನಿಗದಿ ಮಾಡಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲ ಧ್ಯಾನ್ ಚಿನ್ನಪ್ಪ ತಿಳಿಸಿದರು. ಈಗ ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ದಕ್ಷಣ ಕನ್ನಡ ಜಿಲ್ಲೆಯಿಂದ ಕೋಣಗಳ ತರಲಾಗ್ತಿದೆ. ದೊಡ್ಡ ದೊಡ್ಡ ವಾಹನಗಳಲ್ಲಿ ಬೆಂಗಳೂರಿಗೆ ತರಲಾಗ್ತಿದೆ. ಇದರಿಂದ ಕೋಣಗಳಿಗೆ ಹಿಂಸೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ವಾದ ಆಲಿಸಿದ ಕೋರ್ಟ್, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.