ಹೊಸದಿಗಂತ ಡಿಜಿಟಲ್ ಡೆಸ್ಕ್:
ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ, ನಟ ಉದಯನಿಧಿ ಸ್ಟಾಲಿನ್ ಅವರ ಶಾಸಕ ಸ್ಥಾನದ ಅರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ (Madras High Court) ತಿರಸ್ಕರಿಸಿದೆ.
ಉದಯನಿಧಿ ಸ್ಟಾಲಿನ್ ಹೇಳಿದ್ದು ತಪ್ಪು. ಆದರೆ, ಅವರನ್ನು ಅನರ್ಹಗೊಳಿಸಲು ಅಥವಾ ಯಾವುದೇ ಕ್ರಮ ತೆಗೆದುಕೊಳ್ಳಲು, ಅವರಿಗೆ ಯಾವ ನ್ಯಾಯಾಲಯವೂ ಶಿಕ್ಷೆ ನೀಡಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.
ಉದಯನಿಧಿ ಸ್ಟಾಲಿನ್ ವಿರುದ್ಧ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ಶಾಸಕ ಅಥವಾ ಸಂಸದನಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದರೆ ಮಾತ್ರ ಆತನ ಶಾಸಕ ಅಥವಾ ಸಂಸದನ ಸ್ಥಾನ ಅನರ್ಹಗೊಳ್ಳುತ್ತದೆ.
ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸುವ ಜತೆಗೆ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು. ಕಳೆದ ಸೆಪ್ಟೆಂಬರ್ನಲ್ಲಿ ಅವರು ನೀಡಿದ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗುವ ಜತೆಗೆ ಬೆಂಗಳೂರು, ಪಟನಾ, ಉತ್ತರ ಪ್ರದೇಶ ಸೇರಿ ಹಲವೆಡೆ ಎಫ್ಐಆರ್ಗಳು ದಾಖಲಾಗಿವೆ. ಇದರಿಂದ ತಮಿಳುನಾಡು ಸಚಿವನಿಗೆ ತೊಂದರೆಯಾಗುತ್ತಿದ್ದು, ಎಲ್ಲ ಎಫ್ಐಆರ್ಗಳನ್ನು ಒಗ್ಗೂಡಿಸಿ, ವಾದ-ಪ್ರತಿವಾದ ಆಲಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು.
ಉದಯನಿಧಿ ಸ್ಟಾಲಿನ್ ಅರ್ಜಿ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಉದಯನಿಧಿ ಸ್ಟಾಲಿನ್ ಅವರಿಗೆ ರಿಲೀಫ್ ನೀಡುವ ಬದಲು ಚಾಟಿ ಏಟು ಬೀಸಿತ್ತು.