ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಸಂಗ್ರೂರ್‌ನಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಿಲ್ಲಾ ಕಚೇರಿಯನ್ನು ಗುರಿಯಾಗಿಸಿಕೊಂಡು ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಈ ದಿಢೀರ್ ದಾಳಿಯಿಂದಾಗಿ ಸ್ಥಳೀಯ ಪ್ರದೇಶದಲ್ಲಿ ತೀವ್ರ ಆತಂಕ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿದೆ. ಮಾಹಿತಿ ತಿಳಿದ ತಕ್ಷಣವೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಪ್ರಾಣಾಪಾಯವಿಲ್ಲ, ತನಿಖೆ ಚುರುಕು
ಅೃಷ್ಟವಶಾತ್ ಈ ಬಾಂಬ್ ದಾಳಿಯಿಂದ ಕಚೇರಿಗೆ ಯಾವುದೇ ರೀತಿಯ ಭಾರಿ ಹಾನಿ ಸಂಭವಿಸಿಲ್ಲ. ಆದಾಗ್ಯೂ, ಘಟನೆಯ ತೀವ್ರತೆಯನ್ನು ಪರಿಗಣಿಸಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಚೇರಿ ಸುತ್ತಮುತ್ತಲಿನ ಪರಿಸರ ಹಾಗೂ ಆಸುಪಾಸಿನ ಸಿಸಿಟಿವಿ (CCTV) ಕ್ಯಾಮೆರಾ ದೃಶ್ಯಾವಳಿಗಳನ್ನು ವಿಧಿವಿಜ್ಞಾನ ತಂಡ ಹಾಗೂ ಪೊಲೀಸರು ಸಂಗ್ರಹಿಸುತ್ತಿದ್ದು, ದುಷ್ಕರ್ಮಿಗಳ ಸುಳಿವು ಪಡೆಯಲು ಜಾಲ ಬೀಸಿದ್ದಾರೆ.
ಪ್ರದೇಶದಲ್ಲಿ ಹೆಚ್ಚಿದ ಖಾಕಿ ಪಹರೆ
ಈ ಕೃತ್ಯದ ಹಿಂದಿನ ನೈಜ ಉದ್ದೇಶ ಹಾಗೂ ಭಾಗಿಯಾದ ವ್ಯಕ್ತಿಗಳ ವಿವರಗಳು ಸಿಸಿಟಿವಿ ದೃಶ್ಯಗಳ ಕೂಲಂಕಷ ಪರಿಶೀಲನೆಯ ನಂತರವೇ ಸ್ಪಷ್ಟವಾಗಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿಜೆಪಿ ಕಚೇರಿ ಆವರಣದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಬಿಗಿ ಭದ್ರತೆ ಒದಗಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.



