ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬಾರದ ಹಿನ್ನೆಲೆಯಲ್ಲಿ ಆ ಸಿಟ್ಟನ್ನು ರಾಜ್ಯ ಸರಕಾರ ಜನರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ದರ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಿದ್ದರು. ಇದೀಗ ಈಗ ಪೆಟ್ರೋಲ್, ಡೀಸೆಲ್ ದರ ಲೀಟರ್‌ಗೆ 3 ರೂ. ಹೆಚ್ಚಳ ಮಾಡಿದ್ದಾರೆ. ಈ ಮೂಲಕ ರಾಜ್ಯದ ಜನರಿಗೆ ಬರೆ ಹಾಕಲು ಹೊರಟಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರದಲ್ಲಿ ಅಧಿಕಾರಿಗಳಿಗೆ ಸಂಬಳ ಕೊಡಲೂ ಆಗದಂತಹ ಪರಿಸ್ಥಿತಿ ಇದೆ. ಹೀಗಾಗಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಿಎಂ ರೆಡಿ ಇಲ್ಲ, ಅವರು ಭಂಡತನ ಬಿಡಬೇಕು. ಮುಂದಿನ ಸೋಮವಾರ ಪ್ರತಿಭಟನೆ ಮಾಡುತ್ತೇವೆ. ಅಷ್ಟರೊಳಗೆ ಎಚ್ಚೆತ್ತುಕೊಂಡು ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.