ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೀಪಲ್ಸ್ ಡೆಮಾಕ್ರೆಟಿಕ್ ಫ್ರಂಟ್, ಕೆಎಫ್‌ಡಿ ಸೇರಿದಂತೆ ಕೇರಳ, ತಮಿಳುನಾಡಿನ ಮೂರು ಪ್ರತ್ಯೇಕ ಸಂಘಟನೆಗಳು ಒಂದಾಗಿ 2007, ಫೆ.16ರಂದು ಪಿಎಫ್‌ಐ ಜನ್ಮತಾಳಿದ್ದು ಬೆಂಗಳೂರಿನಲ್ಲಿ!
ಈ ಸಮಾವೇಶದ ನಂತರ ಪಿಎಫ್‌ಐ ತನ್ನ ಕಾರ್ಯ ಜಾಲವನ್ನು ಮಂಗಳೂರು, ಉಡುಪಿ, ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿಗೆ ವಿಸ್ತರಿಸಿಕೊಂಡಿರುವುದು ಲಭ್ಯ ದಾಖಲೆಗಳಿಂದ ಸಾಬೀತಾಗಿದೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಪಿಎಫ್‌ಐ ಇಂತಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ನೇರವಾಗಿ ಭಾಗಿಯಾಗಿರುವುದಕ್ಕೆ ಯಾವುದೇ ದಾಖಲೆಯಿಲ್ಲ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಈ ಹಿಂದೆ ಬಲವಾಗಿ ವಾದಿಸಿ ತಮ್ಮ ಸರ್ಕಾರದ ನಿಲುವನ್ನು ಸಮರ್ಥಿಸಿಕೊಂಡಿದ್ದರು.
ಬೆಂಗಳೂರಿನ ವಿವಿಧೆಡೆ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಓರ್ವ ವ್ಯಕ್ತಿ ಮೃತಪಟ್ಟು 20 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆಯ ಬೆನ್ನ ಹಿಂದೆಯೇ ಅಹ್ಮದಾಬಾದ್‌ನಲ್ಲಿ ಸಂಭವಿಸಿದ ೨೧ ಸರಣಿ ಬಾಂಬ್ ಸ್ಫೋಟದಲ್ಲಿ ಒಟ್ಟು 56 ಮಂದಿ ಮೃತಪಟ್ಟು 200 ಮಂದಿಗೆ ಗಾಯಗಳಾಗಿದ್ದವು. ಇದಲ್ಲದೆ ಜೈಪುರದಲ್ಲಿಯೂ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ 63 ಮಂದಿ ಸತ್ತು 21 ಮಂದಿ ಗಾಯಗೊಂಡಿದ್ದರು. ಈ ಎಲ್ಲ ಘಟನೆಗಳ ಹಿಂದೆ ಪಿಎಫ್‌ಐ ಮತ್ತು ಉಗ್ರರ ನಂಟಿರುವುದದನ್ನು ಎನ್‌ಐಎ ಪತ್ತೆ ಮಾಡಿದೆ.
ಇನ್ನು 2010 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದ ಸಮಯದಲ್ಲಿಯೇ ಎರಡು ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ 2015 ರಲ್ಲಿ ಶಿವಮೊಗ್ಗದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತ ವಿಶ್ವನಾಥಶೆಟ್ಟಿ ಕೊಲೆಯಾಗಿತ್ತು. ಈ ಎಲ್ಲ ಪ್ರಕರಣಗಳಲ್ಲಿ ಪಿಎಫ್‌ಐ ಕೈವಾಡವಿತ್ತೆಂಬುದು ಮೇಲ್ನೋಟಕ್ಕೆ ವ್ಯಕ್ತವಾದರೂ ಸಿದ್ದು ಸರ್ಕಾರ ಕೈಗೊಂಡ ತೀರ್ಮಾನದಿಂದ ಸಂಪೂರ್ಣ ಬಚಾವ್ ಆಗಿ ಹೊರಬರುವಂತಾಗಿದೆ!