ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸೇನೆಯಲ್ಲಿ ಅತ್ಯಂತ ಧೈರ್ಯಶಾಲಿ ಶ್ವಾನವೆಂದೇ ಹೆಸರು ಪಡೆದಿದ್ದ ಬೆಲ್ಜಿಯಂ ಮಾಲಿನೋಯಿಸ್ ತಳಿಯ ಶ್ವಾನ ಪ್ಯಾಂಟಮ್.
ಎರಡು ವರ್ಷಗಳಿಂದ ಸೇನಾಪಡೆಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಧೈರ್ಯಶಾಲಿ ಶ್ವಾನವಾಗಿತ್ತು ಪ್ಯಾಂಟಮ್.
ಆದ್ರೆ ಇದೀಗ ಬೇಸರದ ವಿಚಾರ ಏನೆಂದರೆ ಸೋಮವಾರದಂದು ಭಯೋತ್ಪಾದಕರನ್ನು ಹುಡುಕಿ ಹೊರಟಿದ್ದ ಸೇನಾಪಡೆಯೊಂದಿಗೆ ಪ್ಯಾಂಟಮ್ ಕೂಡ ಸೇರಿಕೊಂಡಿತ್ತು.ಈ ವೇಳೆ ಉಗ್ರರು ಹಾಗೂ ಸೇನಾಪಡೆಯ ನಡುವೆ ನಡೆಯುತ್ತಿದ್ದ ಗುಂಡಿನ ದಾಳಿಯಲ್ಲಿ ಪ್ಯಾಂಟಮ್ಗೆ ಗುಂಡು ತಗುಲಿ ಅಸುನೀಗಿದೆ.
ಸೋಮವಾರ ಮುಂಜಾನೆ ನಡೆದ ಘಟನೆಯಲ್ಲಿ ಪ್ಯಾಂಟಮ್ ಪ್ರಾಣ ಕಳೆದುಕೊಂಡಿದ್ದಾನೆ. ಆಗಸ್ಟ್ 2022ರಿಂದ ಇಲ್ಲಿಯವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಪ್ಯಾಂಟಮ್ ಒಬ್ಬ ಶಿಸ್ತಿನ ಸೈನಿಕನಂತೆಯೇ ಕಾರ್ಯನಿರ್ವಹಿಸಿದ್ದಾನೆ.
ಪ್ಯಾಂಟಮ್ ಅಗಲಿಕೆಗೆ ವೈಟ್ ನೈಟ್ ಕಾರ್ಪ್ಸ್ ಅಶ್ರುತರ್ಪಣ ಸಲ್ಲಿಸಿದ್ದಾರೆ. ಭಾರತೀಯ ಸೇನೆಯ ಶ್ವಾನ ಪ್ಯಾಂಟಮ್ ಎಂಬ ನಿಜವಾದ ಹೀರೋನ ತ್ಯಾಗಕ್ಕೆ ಒಂದು ಸಲಾಂ. ನಮ್ಮ ಸೇನಾಪಡೆ ಉಗ್ರರನ್ನು ಸೆದೆಬಡಿಯುವ ಕಾರ್ಯಾಚರಣೆಯಲ್ಲಿ ಪ್ಯಾಂಟಮ್ ತನ್ನ ಜೀವವನ್ನು ನೀಡಿದ್ದಾನೆ ಪ್ಯಾಂಟಮ್ನ ಧೈರ್ಯ, ಪ್ರಾಮಾಣಿಕತೆ ಹಾಗೂ ಶ್ರದ್ಧೆ ಎಂದಿಗೂ ಕೂಡ ಮರೆಯುವಂತದ್ದಲ್ಲ. ಸದ್ಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಎಲ್ಲಾ ಉಗ್ರರನ್ನು ಹೊಡೆದುರುಳಿಸಲಾಗಿದ್ದು. ಶಸ್ತ್ರಾಸ್ತ್ರಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ವೈಟ್ ನೈಟ್ ಕಾರ್ಪ್ಸ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇತ್ತೀಚೆಗೆ ಮೂವರು ಉಗ್ರರು ಭಾರತೀಯ ಸೇನಾ ಆ್ಯಂಬುಲೆನ್ಸ್ ಮೇಲೆ ಬಟ್ಟಾಲಾ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಲು ಅಂತ ಸೇನೆ ಹಾಗೂ ಜಮ್ಮು ಕಾಶ್ಮೀರದ ಪೊಲೀಸರು ಜಂಟಿಯಾಗಿ ಶೋಧಕಾರ್ಯ ನಡೆಸಿದ್ದರು. ಅಖನೂರ್ ಏರಿಯಾದಲ್ಲಿ ಒಬ್ಬ ಉಗ್ರನನ್ನು ಹೊಡೆದುರಳಿಸುವಲ್ಲಿ ಯಶಸ್ವಿಯಾದ ಸೇನಾಪಡೆ ಹಾಗೂ ಪೊಲೀಸರು ಮಂಗಳವಾರ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಉಳಿದ ಇಬ್ಬರು ಉಗ್ರರನ್ನು ಯಮಪುರಿಗೆ ಅಟ್ಟಿದ್ದಾರೆ. ಇದೇ ಕಾರ್ಯಾಚರಣೆ ವೇಳೆ ಸೇನಾಪಡೆಯೊಂದಿಗೆ ಉಗ್ರರ ಪತ್ತೆಗೆ ಹೋಗಿದ್ದ ಪ್ಯಾಂಟಮ್ ಗುಂಡು ತಗುಲಿ ಅಸುನೀಗಿದ್ದಾನೆ. ಪ್ಯಾಂಟಮ್ಗೆ ಎಲ್ಲ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.