ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಬೋಡಿಯಾದ ಮಾಜಿ ನಾಯಕನೊಂದಿಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಆರೋಪದ ಮೇಲೆ ತನಿಖೆ ನಡೆಯುವವರೆಗೂ ಥೈಲ್ಯಾಂಡ್‌ನ ಸಾಂವಿಧಾನಿಕ ನ್ಯಾಯಾಲಯವು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ಅವರನ್ನು ಅಧಿಕಾರದಿಂದ ಅಮಾನತುಗೊಳಿಸಿದೆ.
ಕರೆ ಸೋರಿಕೆಯಾದ ಹಿನ್ನಲೆಯಲ್ಲಿ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದರು. ಆದರೆ, ಅದಕ್ಕೆ ಶಿನವಾತ್ರ ನಿರಾಕರಿಸಿದ್ದ ಹಿನ್ನಲೆಯಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಮಂಗಳವಾರ ನ್ಯಾಯಾಧೀಶರು ಅವರ ಮೇಲೆ ನೈತಿಕತೆಯ ಉಲ್ಲಂಘನೆ ಆರೋಪ ಹೊರಿಸಿ ಸಲ್ಲಿಸಲಾದ ಅರ್ಜಿಯನ್ನು ಸರ್ವಾನುಮತದಿಂದ ಅಂಗೀಕರಿಸಿದರು ಮತ್ತು ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲು 7 ರಿಂದ 2 ಮತಗಳ ಮತ ಚಲಾಯಿಸಲಾಗಿದೆ.
ಪೇಟೊಂಗ್‌ಟಾರ್ನ್, ಕಾಂಬೋಡಿಯಾದ ಮಾಜಿ ನಾಯಕನನ್ನು “ಅಂಕಲ್” ಎಂದು ಕರೆದಿದ್ದಲ್ಲದೆ ಥಾಯ್ ಮಿಲಿಟರಿ ಕಮಾಂಡರ್‌ನನ್ನು ಟೀಕಿಸಿದ್ದು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು. ಅವರನ್ನು ಪ್ರಧಾನಿ ಹುದ್ದೆಯಿಂದ ವಜಾ ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಕೋರ್ಟ್ ಕೂಡ ಪರಿಗಣಿಸುತ್ತಿದೆ.
ಎರಡು ವಾರಗಳ ಹಿಂದೆ ಪ್ರಮುಖ ಸಂಪ್ರದಾಯವಾದಿ ಮಿತ್ರಪಕ್ಷವೊಂದು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಬಳಿಕ, ಅವರ ಆಡಳಿತ ಒಕ್ಕೂಟವು ಈಗಾಗಲೇ ಅಲ್ಪಮತಕ್ಕೆ ಕುಸಿದಿದೆ.
ಈ ಮಧ್ಯೆ ಉಪ ಪ್ರಧಾನಿ ದೇಶದ ಹಂಗಾಮಿ ನಾಯಕಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಆದರೆ, ಪೇಟೊಂಗ್‌ಟಾರ್ನ್ ಅವರು ಸಂಸ್ಕೃತಿ ಸಚಿವರಾಗಿ ಸಂಪುಟದಲ್ಲಿ ಉಳಿಯಲಿದ್ದಾರೆ, ಅವರನ್ನು ಅಮಾನತುಗೊಳಿಸುವ ಗಂಟೆಗಳ ಮೊದಲು ನಡೆದ ಸಂಪುಟ ಪುನರ್ರಚನೆಯ ವೇಳೆ ಈ ಸಂಪುಟ ಬದಲಾವಣೆಯನ್ನು ಅನುಮೋದಿಸಲಾಗಿತ್ತು.
ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಆಯೋಗದ ಕಚೇರಿಯಿಂದ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪದ ಮೇಲೆ ಪೇಟೊಂಗ್‌ಟಾರ್ನ್ ತನಿಖೆಗಳನ್ನು ಎದುರಿಸುತ್ತಿದ್ದಾರೆ.