ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಯುಗದಲ್ಲಿ ಫೋನ್, ಸಾಮಾಜಿ ಜಾಲತಾಣ, ವಿಡಿಯೋ ಗೇಮ್ಸ್, ಟಿವಿ ಸೀರಿಯಲ್‌ಗಳು ಹೀಗೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳ ನಡುವೆ ತಮ್ಮ ಜೀವನ ಕಳೆಯುವ ದಿನಗಳಲ್ಲಿ ಒಂದು ಮಾದರಿ ಗ್ರಾಮವಿದೆ. ಇಲ್ಲಿ ರಾತ್ರಿ 7 ರಿಂದ 8:30 ರವರೆಗೆ ಮಕ್ಕಳು ಮತ್ತು ದೊಡ್ಡವರು ಟಿವಿ ಮತ್ತು ಫೋನ್ ಬಳಸಬಾರದು ಎಂದು ಅಲ್ಲಿನ ಸರಪಂಚ್ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ್ ಮಂಡಲದ ಮೋಹಿತ್ಯಾಂಚೆ ವಡ್ಗಾಂವ್ ಗ್ರಾಮದಲ್ಲಿ ರಾತ್ರಿ 7 ರಿಂದ 8.30 ರವರೆಗೆ ಟಿವಿ ಮತ್ತು ಸೆಲ್ ಫೋನ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಆ ಗ್ರಾಮದ ಸರಪಂಚ ವಿಜಯ್ ಮೋಹಿತೆ ತೆಗೆದುಕೊಂಡ ನಿರ್ಧಾರದಿಂದ ಆ ಗ್ರಾಮದ ಹೆಸರು ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಗ್ರಾಮದ ಒಟ್ಟು ಜನಸಂಖ್ಯೆ 3,105. ಲಾಕ್‌ಡೌನ್ ಸಮಯದಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳನ್ನು ಕೇಳಲು ಪೋಷಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದರು. ಅಂದಿನಿಂದ ಎಲ್ಲಾ ಮಕ್ಕಳು ಗಂಟೆಗಟ್ಟಲೆ ಮೊಬೈಲ್‌ಗೆ ವ್ಯಸನಿಯಾಗಿ ಶಾಲೆಯಿಂದ ಬಂದ ನಂತರ ಪುಸ್ತಕಗಳನ್ನು ಓದೋದು ಕಡಿಮೆ ಮಾಡಿದರು.
ಮತ್ತೊಂದೆಡೆ ಮಹಿಳೆಯರು ತಮ್ಮ ಸಂಜೆಯನ್ನು ಟಿವಿ ಧಾರಾವಾಹಿ ನೋಡುವುದರಲ್ಲಿ ಕಳೆಯುತ್ತಾರೆ. ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಗಮನ ಹರಿಸುತ್ತಿಲ್ಲ ಇದನ್ನೆಲ್ಲ ಕಂಡ ಗ್ರಾಮದ ಸರಪಂಚ್ ವಿಜಯ್ ಮೋಹಿತೆ ಗ್ರಾಮದಲ್ಲಿ ಸಂಜೆ 7ರಿಂದ 8.30ರವರೆಗೆ ಯಾರೂ ಟಿವಿ ನೋಡಬಾರದು, ಫೋನ್ ಬಳಸಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಮೊದಮೊದಲು ಆದೇಶವನ್ನು ಅನುಸರಿಸಲು ಗ್ರಾಮಸ್ಥರು ಹಿಂದೇಟು ಹಾಕಿದರೂ ಸಹ ಇದೀಗ ಚಾಚೂ ತಪ್ಪದೆ ಅನುಸರಿಸುತ್ತಿದ್ದಾರೆ. ಆಗಸ್ಟ್ 15ರಿಂದ ಆ ಊರಿನಲ್ಲಿ ಸರಿಯಾದ ಸಮಯಕ್ಕೆ ಸೈರನ್ ಮೊಳಗುತ್ತದೆ. ಅಲ್ಲಿಂದ ಒಂದೂವರೆ ಗಂಟೆ ಟಿವಿ, ಸೆಲ್ ಫೋನ್ ಗಳು ಮ್ಯೂಟ್ ಆಗಲಿವೆ. ಮಕ್ಕಳು ಪುಸ್ತಕ ಓದುತ್ತಿದ್ದರೆ, ಮಹಿಳೆಯರು ಅಡುಗೆ ಮನೆ ಗಮನ ಹರಿಸುತ್ತಿದ್ದಾರೆ. ಪಂಚಾಯಿತಿ ಸದಸ್ಯರು, ಸರ್ಕಾರಿ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮದಲ್ಲಿ ನಿಯಮ ಉಲ್ಲಂಘಿಸದಂತೆ ನಿಗಾ ವಹಿಸಿದ್ದಾರೆ.